ಪುತ್ತೂರು: ಪಿಕಪ್ ವಾಹನವೊಂದರಲ್ಲಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪುತ್ತೂರು ನಗರ ಪೊಲೀಸರು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ಪತ್ತೆ ಮಾಡಿ, 4 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಶಾಂತಿಮಾರು ಕುಂಡಡ್ಕ ನಿವಾಸಿ ಮಹಮ್ಮದ್ ಮುವಾಜ್ (28), ವಿಟ್ಲ ಕಂಬಳಬೆಟ್ಟು ನಿವಾಸಿ ಮೊಹಮ್ಮದ್ ಹ್ಯಾರೀಸ್(38) ಮತ್ತು ಕಡಬ ತಾಲ್ಲೂಕಿನ ಕೊಯಿಲ ಗ್ರಾಮದ ಕೆಮ್ಮಾರ ನಿವಾಸಿ ಮೊಹಮ್ಮದ್ ಫೈಸಲ್ (24) ಬಂಧಿತ ಆರೋಪಿಗಳು.
ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರತರಾಗಿದ್ದ ಪುತ್ತೂರು ನಗರ ಠಾಣೆಯ ಪೊಲೀಸರು ಸೋಮವಾರ ಬೆಳ್ಳಂಬೆಳಗ್ಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ 4 ಜಾನುವಾರುಗಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಕಾರ್ಯಾಚರಣೆಯ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ವಾಹನದಲ್ಲಿದ್ದ ಎರಡು ಹೋರಿ ಹಾಗೂ 2 ಹಸುಗಳ ಜೊತೆಗೆ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.