ಮಂಗಳೂರು: ಗುತ್ತಿಗೆ ಆಧಾರಿತ ನೌಕರರು ಎನ್ಆರ್ಪಿಎಲ್ ಯೋಜನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾಗ, ದತ್ತಾಂಶಗಳನ್ನು ನಾಶಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಹಲವು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ಮಚ್ಚಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲುಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಾದ ಇರ್ಫಾನ್, ಅಬ್ದುಲ್ ರಶೀದ್, ರಫೀಕ್ ಬಂಗೇರಕಟ್ಟೆ, ನಜೀರ್, ರಜಾಕ್ ಬಿನ್ ಐಸಮ್ಮ, ಬದ್ರುದ್ದೀನ್ ಬಿನ್ ಐಸಮ್ಮ, ಜುನೈದ್ ಬಿನ್ ಹಮೀದ್ ಸಾಲುಮರ, ಹಮಿದ್, ನವಾಜ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ ಪಂಚಾಯತಿ ಅಧ್ಯಕ್ಷೆ ಹರ್ಷಲತಾ ಅವರು ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಜಾನಕಿ, ರೂಪಾ ಮತ್ತು ಪವಿತ್ರಾ ಎಂಬುವರೊಂದಿಗೆ ಜಿಲ್ಲಾ ಪಂಚಾಯತಿ ವತಿಯಿಂದ ಕಲ್ಲುಗುಡ್ಡೆ ಎಂಬಲ್ಲಿ ಎನ್ಆರ್ಪಿಎಲ್ ಯೋಜನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದ್ದರು.
ಈ ಸಂದರ್ಭದಲ್ಲಿ ಆರೋಪಿಗಳು ಮಾಹಿತಿ ಸಂಗ್ರಹಣೆ ಮಾಡಲು ಅಡ್ಡಿಪಡಿಸಿದ್ದಲ್ಲದೆ, ಸಂಗ್ರಹಿಸಿದ್ದ ದತ್ತಾಂಶಗಳನ್ನು ನಾಶಗೊಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.