ಮಂಗಳೂರು: ನಗರದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದೆ. ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಕಾನೂನು ಬಾಹಿರ ಚಟುವಟಿಕೆ ಮಾಡ್ತಾ ಇದ್ದಾರೆ. ಇದಕ್ಕೆಲ್ಲ ಯಾವುದೇ ಜಾತಿ ಧರ್ಮ ಬರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಜರಂಗದಳ ಕಾರ್ಯಕರ್ತರಿಗೆ ಗಡೀಪಾರು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು ಕಾನೂನು ಬಾಹಿರ ಚಟುವಟಿಕೆ ಯಾರೇ ಕೈಗೊಳ್ಳಲಿ ಅವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಸರ್ಕಾರ ಕೈಗೊಳ್ಳಲಿದೆ. ಬಜರಂಗ ದಳ ಕಾರ್ಯಕರ್ತರು ಕಾನೂನು ಬಾಹಿರ ಚಟುವಟಿಕೆ ಮಾಡ್ತಾ ಇದ್ದಾರೆ. ಇಂಥವರ ಪರ ಬಿಜೆಪಿಯವರು ವಕಾಲತ್ತು ವಹಿಸ್ತಾರೆ ಎಂದರೆ ಅದಕ್ಕಿಂತ ಕೆಟ್ಟ ಸಂಗತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪೊಲೀಸರಿಗೆ ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಯಾವುದೇ ಪ್ರಸ್ತಾಪ ಇಲ್ಲ. ಗಡೀಪಾರು ನೋಟೀಸ್ ಕೊಟ್ಟವರು ಅಪರಾಧಿಗಳು, ಅನೇಕ ಪ್ರಕರಣಗಳಲ್ಲಿ ಭಾಗಿಯಾದವರು, ಅನೇಕ ಕೇಸ್ ಇದೆ. ಆ ರೀತಿ 65 ಜನರನ್ನ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪಟ್ಟಿಯನ್ನು ಇವರು ನೋಡಲಿ, ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾನೂನು ಬಾಹಿರ ಚಟುವಟಿಕೆಗೆ ಬಿಜೆಪಿ ಇದನ್ನ ಪ್ರೋತ್ಸಾಹಿಸುತ್ತೆ ಎಂದಾದರೆ, ಅಂಥವರಿಗೆ ಇವರ ಬೆಂಬಲ ಇದೆ ಅಂತಾಯ್ತು. ಅಪರಾಧಿಗಳಿಗೆ ಬಿಜೆಪಿ ಬೆಂಬಲ ಕೊಡ್ತಾ ಇದೆ. ಪೊಲೀಸ್ ಇಲಾಖೆಯಲ್ಲಿ ನಮ್ಮದು ಯಾವುದೇ ಹಸ್ತಕ್ಷೇಪ ಇಲ್ಲ. ಡ್ರಗ್ ಮಾಫಿಯಾ, ನೈತಿಕ ಪೊಲೀಸ್ ಗಿರಿ ವಿರುದ್ದ ಕ್ರಮ ತೆಗೆದುಕೊಳ್ತಾ ಇದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ನಾಯಕರು ವಾತಾವರಣ ಕೆಡಿಸ್ತಾ ಇದ್ದಾರೆ ಎಂದು ಆರೋಪಿಸಿದರು.
ಪ್ರತಿಕೂಲ ಹವಾಮಾನ ಎರಡು ವಿಮಾನ ಡೈವರ್ಟ್: ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಎರಡು ವಿಮಾನಗಳನ್ನು ಡೈವರ್ಟ್ ಮಾಡಿ ಬಳಿಕ ಮತ್ತೆ ಮಂಗಳೂರಿನಲ್ಲಿ ಇಳಿಸಲಾಯಿತು. ಪ್ರತಿಕೂಲ ಹವಾಮಾನ ಹಿನ್ನೆಲೆ ಬೆಂಗಳೂರು - ಮಂಗಳೂರು ಮತ್ತು ಮುಂಬೈ - ಮಂಗಳೂರು ನಡುವಿನ ವಿಮಾನ ಸಂಚಾರ ವ್ಯತ್ಯಯವಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಿಮಾನದಲ್ಲಿ ಆರೋಗ್ಯ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಯಾಣಿಸುತ್ತಿದ್ದರು.
ಬೆಂಗಳೂರಿನಿಂದ ಹೊರಟು ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಕಣ್ಣೂರಿಗೆ ಡೈವರ್ಟ್ ಮಾಡಲಾಯಿತು. ಬೆಂಗಳೂರಿನಿಂದ 9.55ಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಬೆಳಗ್ಗೆ 11 ಗಂಟೆಗೆ ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಪ್ರತಿಕೂಲ ಹವಾಮಾನ ಹಿನ್ನೆಲೆ ಕೇರಳದ ಕಣ್ಣೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಮಾಡಲಾಯಿತು. ಬಳಿಕ ಹವಾಮಾನ ಬದಲಾವಣೆ ಬೆನ್ನಲ್ಲೇ ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ಗೆ ಅನುಮತಿ ನೀಡಲಾಯಿತು.
ಇದನ್ನೂಓದಿ:ಪಿಎಸ್ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ..ಸರ್ಕಾರದ ಆಲೋಚನೆ ಏನೆಂದು ನನಗೆ ತಿಳಿದಿಲ್ಲ: ಮಾಜಿ ಸಿಎಂ ಬೊಮ್ಮಾಯಿ