ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಘೀ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು, ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ರೋಗ ಹರಡುತ್ತಿದೆ. ಈ ವರ್ಷದಲ್ಲಿ ಜನವರಿಯಿಂದ ಈವರೆಗೆ 198 ಡೆಂಘೀ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ. ಕಳೆದ ವರ್ಷ ಒಟ್ಟು 388 ಡೆಂಘೀ ಪ್ರಕರಣ ವರದಿ ಆಗಿತ್ತು. ಕಳೆದ ಎರಡು ತಿಂಗಳಿನಿಂದ 40 ಪ್ರಕರಣ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಮಾನವ ಕೃತ ಅಪರಾಧಗಳಿಂದಲೇ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಅದನ್ನು ನಿಯಂತ್ರಣ ಮಾಡಿದಲ್ಲಿ ತೊಂದರೆ ಎದುರಾಗುವುದಿಲ್ಲ ಎಂದು ಹೇಳುತ್ತಾರೆ. ಈ ವರ್ಷ ಅಲ್ಲಲ್ಲಿ ಡೆಂಘೀ ಪೀಡಿತರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಕಂಡುಬಂದಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಜ್ವರಪೀಡಿತರಾಗಿ ದಾಖಲಾಗುವವರಲ್ಲಿ ಹೆಚ್ಚಿನವರು ಡೆಂಘೀ ಬಾಧಿತರಾಗುತ್ತಿದ್ದರೆ, ಕೆಲವರು ಔಷಧ ಪಡೆದುಕೊಂಡು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಆರೋಗ್ಯ ಇಲಾಖೆ ಎಲಿಝಾ ಟೆಸ್ಟ್ನಲ್ಲಿ ಪಾಸಿಟಿವ್ ಬಂದರಷ್ಟೇ ಡೆಂಘೀಯನ್ನು ಅಧಿಕೃತಗೊಳಿಸುತ್ತದೆ. ಹೀಗಾಗಿ ಇಲಾಖೆಯ ಲೆಕ್ಕಾಚಾರದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 198 ಡೆಂಘೀ ಪ್ರಕರಣಗಳು ದಾಖಲಾಗಿದ್ದರೂ ಈ ಪ್ರಕರಣ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಈ ವರ್ಷದಲ್ಲಿ ಡೆಂಘೀಯಿಂದಾಗಿಯೇ ಒಬ್ಬ ಯುವತಿ ಮೃತಪಟ್ಟಿದ್ದಳು.
2018 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಘೀ ತನ್ನ ಪ್ರತಾಪ ತೋರಿಸಿತ್ತು. ಆ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇದೀಗ ಮಳೆ ಆಗಾಗ್ಗೆ ಬರುತ್ತಿರುವ ಕಾರಣ ನೀರು ನಿಲ್ಲುವುದು ಸಹಿತ ಹಲವು ಸಮಸ್ಯೆಗಳಿಂದಾಗಿ 2023ರಲ್ಲೂ ಇದೇ ಮಾದರಿಯಲ್ಲಿ ಡೆಂಘೀ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ 52 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. 2022 ರಲ್ಲಿ 168 ಪ್ರಕರಣ ದಾಖಲಾಗಿತ್ತು. 2021ರಲ್ಲಿ 689 ಪ್ರಕರಣಗಳು ದಾಖಲಾಗಿತ್ತು. 2020ರಲ್ಲಿ 1,397 ಪ್ರಕರಣಗಳು ದಾಖಲಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಪ್ರಮಾಣ ಕಡಿಮೆ ಆಗಿದೆ.
ಡೆಂಘೀ ತಡೆಯಲು ಕ್ರಮಗಳೇನು?: ಮನೆ, ಕಚೇರಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಡೆಂಗ್ಯೂ ಹರಡುವ ಈಡೀಸ್ ಸೊಳ್ಳೆಗಳು ತಿಳಿನೀರಿನಲ್ಲಿ ಹುಟ್ಟಿಕೊಳ್ಳುತ್ತದೆ. ಒಂದು ಕಡೆ ನಿಂತಿರುವ ಒಂದು ಚಮಚ ನೀರಿನಿಂದಲೂ ಸೊಳ್ಳೆ ಉತ್ಪತ್ತಿಯಾಗುತ್ತದೆ. ಮನೆಯೊಳಗೆ ಪ್ರಿಡ್ಜ್, ವಾಷಿಂಗ್ ಮೆಷಿನ್ ಅಡಿಭಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಹೊರಗಡೆ ಇರುವ ಹೂವಿನ ಕುಂಡ, ಗೆರಟೆ ಸೇರಿದಂತೆ ನೀರು ಶೇಖರವಾಗಿರದಂತೆ ನೋಡಬೇಕು. ಮನೆಯ ಸುತ್ತಲಿನ ಪ್ರದೇಶ ಮತ್ತು ಮನೆಯೊಳಗೆ ಸೊಳ್ಳೆಗಳ ಲಾರ್ವ ಇದ್ದರೆ ಅದನ್ನು ನಾಶಪಡಿಸಬೇಕು.
ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಬೇಕು: ಸೊಳ್ಳೆಗಳು ಮನುಷ್ಯನ ರಕ್ತ ಹೀರುವುದನ್ನೇ ಕಾಯುತ್ತಿರುತ್ತವೆ. ಇದರಲ್ಲಿ ಅಪಾಯಕಾರಿಯಾದ ಡೆಂಗ್ಯೂ ಸೊಳ್ಳೆಗಳು ಕಚ್ಚಿದರೆ ಮನುಷ್ಯನಿಗೆ ಡೆಂಗ್ಯೂ ಜ್ವರ ಬಾಧಿಸುತ್ತದೆ. ಇದಕ್ಕಾಗಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಬೇಕು. ಮನೆಯೊಳಗೆ ಸೊಳ್ಳೆ ನಿರೋಧಕಗಳ ಬಳಕೆ ಮಾಡಬೇಕು. ಮೈ ಕೈಗಳಿಗೆ ಸೊಳ್ಳೆ ನಿರೋಧಕ ಕ್ರೀಂ ಅಥವಾ ಕಹಿ ಬೇವಿನ ಎಣ್ಣೆಗಳನ್ನು ಹಚ್ಚಬೇಕು.
ಇದನ್ನೂ ಓದಿ: Dengue fever : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ .. ಭಯ ಬೇಡ, ಜಾಗ್ರತೆಯಿರಲಿ ಎಂದ ಸಿಎಂ ಸಿದ್ದರಾಮಯ್ಯ