ಬಂಟ್ವಾಳ: ಪೊಲೀಸರು, ಗಣ್ಯ ವ್ಯಕ್ತಿಗಳ ನಕಲಿ ಫೇಸ್ ಬುಕ್ ಖಾತೆಗಳನ್ನು ಮಾಡಿಕೊಂಡು ಹಣಕ್ಕಾಗಿ ಮೆಸೇಜ್ ಮಾಡುವ ಕಿಡಿಗೇಡಿ ಕೃತ್ಯಗಳು ಕೆಲ ತಿಂಗಳಿಂದ ಸಕ್ರಿಯವಾಗಿದ್ದು, ಇದೀಗ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಅವರಿಗೂ ಇದು ಅನುಭವಕ್ಕೆ ಬಂದಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಅವರ ಫೇಸ್ ಬುಕ್ ನ ನಕಲಿ ಖಾತೆಯನ್ನು ಕಿಡಿಗೇಡಿಗಳು ಸೃಷ್ಟಿಸಿದ ಕುರಿತು ದ.ಕ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸನ್ನ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿದಾತ ಫೇಸ್ಬುಕ್ ಬಳಕೆದಾರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಮೆಸೆಂಜರ್ ನಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಹೀಗೆ ಪಿಎಸ್ಐ ಅವರ ಸ್ನೇಹಿತರೊಬ್ಬರಿಗೆ ಇದೇ ರೀತಿ ಆಗಿದ್ದು ಅನುಮಾನಗೊಂಡ ಸ್ನೇಹಿತರೊಬ್ಬರು ಈ ಕುರಿತು ಅಧಿಕಾರಿಯ ಗಮನಕ್ಕೆ ತಂದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಖಾತೆಯನ್ನು ರಿಪೋರ್ಟ್ ಮಾಡಿ ಬ್ಲಾಕ್ ಮಾಡಿಸಲಾಗಿದ್ದು, ಇದರ ಜಾಡು ಪತ್ತೆಹಚ್ಚಲಾಗುತ್ತಿದೆ. ಇದೇ ರೀತಿ ಗಣ್ಯರು, ಪೊಲೀಸರ ನಕಲಿ ಅಕೌಂಟ್ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುವ ಕುರಿತು ಈಗಾಗಲೇ ಹಲವು ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅನುಮಾನ ಬಂದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.