ಮಂಗಳೂರು: ನವರಾತ್ರಿ ಹಬ್ಬದ ಪ್ರಯುಕ್ತ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಾಲೆಯೊಂದಕ್ಕೆ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಲಾಗಿತ್ತು. ಆದರೆ ವಾಹನ ಚಾಲಕರು ಮದ್ಯ ಸೇವನೆಯಲ್ಲಿ ನಿರತರಾಗಿ ಕುಕ್ಕೇ ಸುಬ್ರಹ್ಮಣ್ಯ ಶ್ರೀ ದೇವರ ಅನ್ನ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.
ನವರಾತ್ರಿ ಹಬ್ಬದ ಪ್ರಯುಕ್ತ ಶಾರದಾ ಪೂಜಾ ದಿನದಂದು ಸುಳ್ಯದ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಏರ್ಪಡಿಲಾಗಿತ್ತು. ಇದಕ್ಕಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಭೋಜನಕ್ಕಾಗಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಭೋಜನ ವ್ಯವಸ್ಥೆ ಮಾಡಿ ವಾಹನವೊಂದರಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಈ ಪ್ರಸಾದವನ್ನು ಶಾಲೆಗೆ ತಲುಪಿಸಲು ಐವರ್ನಾಡಿನಿಂದ ಹೊರಟ ಪಿಕ್ಕಪ್ ವಾಹನದಲ್ಲಿದ್ದ ವ್ಯಕ್ತಿಗಳು ಬೂದಿಪಲ್ಲ ಸಮೀಪದ ಬಾರ್ & ರೆಸ್ಟೋರೆಂಟ್ಗೆ ಹೋಗಿ ಮದ್ಯ ಸೇವನೆಯಲ್ಲಿ ನಿರತರಾಗಿದ್ದು, ಸುಮಾರು ಮುಕ್ಕಾಲು ಗಂಟೆಗಳ ಕಾಲ ಬಾರ್ ಬಳಿಯಲ್ಲಿ ವಾಹನ ನಿಂತಿತ್ತು ಎನ್ನುವ ಆರೋಪ ವ್ಯಕ್ತವಾಗಿದೆ.
ಇದನ್ನು ಗಮನಿಸಿದ ಸ್ಥಳೀಯರು ವಾಹನದ ಬಳಿ ಹೋಗಿ ವಿಚಾರಿಸಿದಾಗ ವಾಹನದಲ್ಲಿದ್ದವರಿಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರು ಅಸಮಾಧಾನಗೊಂಡಿದ್ದು, ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದಕ್ಕೆ ಅವಮಾನ ಮಾಡಿದ್ದಾರೆ. ಪ್ರಸಾದವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ನೇರವಾಗಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಬಾರ್ಗೆ ತೆಗೆದುಕೊಂಡು ಹೋದದ್ದು, ಅಲ್ಲಿ ಮದ್ಯ ಸೇವನೆ ಮಾಡಿರುವುದು ಎಷ್ಟು ಸರಿ, ಪವಿತ್ರ ಪ್ರಸಾದವನ್ನು ಈ ರೀತಿ ಮಾಡುವುದು ತಪ್ಪು ಎಂಬುದಾಗಿ ಆರೋಪಿಸಿದ್ದಾರೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.