ಮಂಗಳೂರು: ಎಂದಿನಂತೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದೆ. ಇಂದಿನಿಂದ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಮೀನುಗಾರಿಕಾ ಋತುವಿನಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಯುವ ಈ ಉದ್ಯಮದಲ್ಲಿ ವರ್ಷದಲ್ಲಿ ಎರಡು ತಿಂಗಳ ರಜಾ ಅವಧಿ ಇರುತ್ತದೆ. ಪ್ರತಿ ವರ್ಷ ಆಗಸ್ಟ್ ತಿಂಗಳಿಂದ ಮೇ ತಿಂಗಳವರೆಗೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಇರುತ್ತದೆ.
ಈ ಸಂದರ್ಭದಲ್ಲಿ ಪಶ್ಚಿಮ ಕರಾವಳಿಯಿಂದ ಸಾವಿರಾರು ಮೀನುಗಾರಿಕಾ ಬೋಟ್ಗಳು ಆಳ ಸಮುದ್ರ ಮೀನುಗಾರಿಕೆ ನಡೆಸುತ್ತವೆ. ಆಳ ಮೀನುಗಾರಿಕಾ ಉದ್ಯಮಕ್ಕೆ ಜೂನ್ ಮತ್ತು ಜುಲೈ ತಿಂಗಳು ರಜಾ ಅವಧಿಯಾಗಿದೆ. ಈ ಅವಧಿಯಲ್ಲಿ ಮೀನುಗಾರಿಕೆ ನಡೆಸದಂತೆ ಸರಕಾರ ನಿಷೇಧ ವಿಧಿಸುತ್ತದೆ.
ಜೂನ್ 1 ರಿಂದ 61 ದಿನಗಳ ಕಾಲ ನಿಷೇಧ ಹಾಕಲಾಗಿದೆ. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವ ಡೀಪ್ ಸೀ ಬೋಟ್ ಮತ್ತು ಪರ್ಸಿನ್ ಬೋಟ್ಗಳು ಮೀನುಗಾರಿಕೆಗೆ ತೆರಳುವಂತಿಲ್ಲ. ಬೋಟ್ಗಳನ್ನು ಆಯಾ ಬಂದರುಗಳಲ್ಲಿ ಮತ್ಸೋದ್ಯಮಿಗಳು ಲಂಗರು ಹಾಕುತ್ತಾರೆ.
ನಿಷೇಧದ ಹಿಂದಿನ ಕಾರಣ: ಮಳೆಗಾಲದ ಆರಂಭದ ಎರಡು ತಿಂಗಳ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ. ಮೀನುಗಳು ಈ ಅವಧಿಯಲ್ಲಿ ಮೊಟ್ಟೆಯನ್ನಿಡುವುದರಿಂದ ಅವುಗಳ ಸಂತತಿ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸ್ಯ ಕ್ಷಾಮ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಳೆಗಾಲದ ಆರಂಭದ ಈ ಅವಧಿಯಲ್ಲಿ ಅರಬ್ಬಿ ಸಮುದ್ರ ರೌದ್ರಾವತಾರ ತಾಳಿರುತ್ತದೆ. ಭಾರಿ ಗಾತ್ರದ ಅಲೆಗಳು ಮತ್ತು ಸಮುದ್ರದ ರೌದ್ರಾವತಾರ ಮೀನುಗಾರರಿಗೆ ಮತ್ತು ಮೀನುಗಾರಿಕೆ ಬೋಟ್ಗಳಿಗೆ ಅಪಾಯ ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದೆ ರಜೆಯಲ್ಲಿ ಇರುತ್ತಾರೆ.
ನಾಡ ದೋಣಿಯಲ್ಲಿ ಮೀನುಗಾರಿಕೆಗೆ ಅವಕಾಶ: ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವ ಈ ಸಂದರ್ಭದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನಾಡದೋಣಿಯಲ್ಲಿ, 10 ಅಶ್ವಶಕ್ತಿಯೊಳಗಿನ ಯಾಂತ್ರಿಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ಇದೆ. ಹೀಗಾಗಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರರು, ಸಾಂಪ್ರದಾಯಿಕ ಮೀನುಗಾರರು ನಾಡದೋಣಿ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ನಾಡದೋಣಿ ಮೀನುಗಾರಿಕೆ ನಡೆಸುವವರು ಸಮುದ್ರ ತೀರಕ್ಕಿಂತ 24 ನಾಟಿಕಲ್ ಮೈಲು ದೂರದ ವರೆಗೆ ಮಾತ್ರ ಮೀನುಗಾರಿಕೆ ನಡೆಸಲು ಅವಕಾಶ ಇದೆ.
ಕರಾವಳಿಯ ಮೀನುಗಾರಿಕೆಯಲ್ಲಿ ಇದೀಗ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶದ ಮೀನುಗಾರರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮೀನುಗಾರಿಕೆಯ ರಜೆಯ ಅವಧಿಯಲ್ಲಿ ಈ ಮೀನುಗಾರರು ತಮ್ಮ ಊರಿಗೆ ತೆರಳುತ್ತಾರೆ. ಇನ್ನುಳಿದ ಮೀನುಗಾರರು ನಾಡದೋಣಿಯ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಈ ಅವಧಿಯಲ್ಲಿ ಆಳ ಸಮುದ್ರ ಹೋಗುವ ಬೋಟ್ಗಳು ಬಂದರ್ಗಳಲ್ಲಿ ಲಂಗರು ಹಾಕಿರುತ್ತದೆ. ಬೋಟ್‌ಗಳ ರಿಪೇರಿ, ಪೇಂಟಿಂಗ್, ಮುಂದಿನ ಮೀನುಗಾರಿಕಾ ಋತುವಿಗೆ ತಯಾರಿ, ಬಲೆ ಸಿದ್ದಪಡಿಸುವುದು ಮೊದಲಾದ ಕಾರ್ಯಗಳನ್ನು ಮಾಡುತ್ತಾರೆ.
2022-23 ರ ಮೀನುಗಾರಿಕೆ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಪರ್ ಮೀನುಗಾರಿಕೆ ನಡೆದಿತ್ತು. ಯಥೇಚ್ಛವಾಗಿ ಮೀನುಗಳ ದೊರೆತ ಕಾರಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೀನಿನ ದರ ತೀರಾ ಅಗ್ಗವಾಗಿತ್ತು. ಈ ಋತುವಿನಲ್ಲಿ ಬಂಗುಡೆ ಮೀನಂತೂ ಯಥೇಚ್ಚವಾಗಿ ದೊರೆತಿದ್ದು, ಅಗ್ಗದ ದರದಲ್ಲಿ ಈ ಮೀನು ದೊರೆಯುತ್ತಿತ್ತು. ಮೀನು ಗ್ರಾಹಕರಿಗೆ ಇದು ಹಬ್ಬದ ಸಮಯವಾದರೂ, ಮಾರುಕಟ್ಟೆ ಮೌಲ್ಯ ತೀರ ಕುಸಿದಿದ್ದರಿಂದ ಮೀನು ಉದ್ಯಮ ನಷ್ಟಕ್ಕೆ ಒಳಗಾಗಿತ್ತು. 2020-21ನೇ ಸಾಲಿನಲ್ಲಿ 1,924.51 ಕೋಟಿ ರೂ.ಮೊತ್ತದ 1,39,714.04 ಮೆಟ್ರಿಕ್ ಟನ್ ಮೀನು ಲಭ್ಯವಾಗಿತ್ತು. 2021 -22ನೇ ಸಾಲಿನಲ್ಲಿ 3801,60 ಕೋಟಿ ರೂ. ಮೊತ್ತದ 2,91,812 ಮೆಟ್ರಿಕ್ ಟನ್ ಮೀನುಗಾರಿಕೆ ನಡೆದಿದೆ. 2022-23 ರಲ್ಲಿ 4154.80 ಕೋಟಿ ರೂ. ಮೊತ್ತದ 3,33,537.05 ಮೆಟ್ರಿಕ್ ಟನ್ ಮೀನುಗಾರಿಕೆ ನಡೆದಿದೆ.
ಮೀನುಗಾರಿಕಾ ನಿಷೇಧ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದ.ಕ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಹರೀಶ್, "ಇಂದಿನಿಂದ ಜುಲೈ 31 ವರೆಗೆ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ 10 ಅಶ್ವಶಕ್ತಿ ಒಳಗಿನ ಯಾಂತ್ರಿಕೃತ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಈ ನಿಷೇಧದ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸಿದರೆ ಕರ್ನಾಟಕ ಕಡಲ ಮೀನುಗಾರಿಕೆ ಅಧಿನಿಯಮ 1986ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತಹ ಬೋಟ್ಗಳಿಗೆ ಸಬ್ಸಿಡಿ ಮತ್ತು ಇನ್ನಿತರ ಸೌಲಭ್ಯಗಳನ್ನು ನಿಲ್ಲಿಸಲಾಗುವುದು" ಎಂದು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಮೀನುಗಾರರು ಸ್ವಯಂ ಪ್ರೇರಿತರಾಗಿ ಮೀನುಗಾರಿಕೆಗೆ ರಜೆ ತೆಗೆದುಕೊಳ್ಳುತ್ತಾರೆ. ಈ ಬಾರಿ ನಿಷೇಧದ ಅವಧಿಗೆ ಕೆಲ ದಿನಗಳ ಮುಂಚೆಯೆ ಹಲವು ಮೀನುಗಾರಿಕಾ ಬೋಟ್ಗಳು ಮೀನುಗಾರಿಕೆ ನಿಲ್ಲಿಸಿ ಬಂದರುಗಳಲ್ಲಿ ಲಂಗರು ಹಾಕಿದ್ದವು. ಇನ್ನು ಮುಂದಿನ ಮೀನುಗಾರಿಕಾ ಋತು ಆರಂಭವಾಗಲು ಆಗಷ್ಟ್ ವರೆಗೆ ಕಾಯಬೇಕಾಗಿದೆ. ಅಷ್ಟರವರೆಗೆ ಮೀನು ಪ್ರಿಯರು ನಾಡದೋಣಿಯಲ್ಲಿ ಸಿಗುವ ಮೀನುಗಳಿಗಷ್ಟೆ ತೃಪ್ತಿ ಪಡಬೇಕಾಗಿದೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದ ರನ್ ವೇ ನವೀಕರಣ ಕಾಮಗಾರಿ ಪೂರ್ಣ