ಬಂಟ್ವಾಳ(ದಕ್ಷಿಣ ಕನ್ನಡ) : ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ, ಉದ್ಯಮಿ, ಹಾಗೂ ಬಿಲ್ಲವ ಮುಖಂಡ ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಕೆ.ಸೇಸಪ್ಪ ಕೋಟ್ಯಾನ್ (75) ಅವರು, ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ (ಜ.26) ರಾತ್ರಿ ನಿಧನ ಹೊಂದಿದ್ದಾರೆ. ಪತ್ನಿ, ಪುತ್ರ ಉದ್ಯಮಿ ಭುವನೇಶ್ ಪಚ್ಚಿನಡ್ಕ, ಹಾಗೂ ನಾಲ್ಕು ಹೆಣ್ಣುಮಕ್ಕಳನ್ನು ಬಿಟ್ಟು ಅವರು ಆಗಲಿದ್ಧಾರೆ.
ಸ್ವತಃ ಬಡತನದಿಂದ ಅವರು ಬೀಡಿ ಉದ್ಯಮ ಆರಂಭಿಸಿ, ಹಂತ ಹಂತವಾಗಿ ಪ್ರಗತಿ ಕಂಡು ಸಾವಿರಾರು ಮಂದಿಯ ಮನೆ ಬೆಳಗಲು ಕಾರಣರಾದವರು. ಸಿರಿವಂತಿಕೆ ಬಂದರೂ ಬಡವರನ್ನು ಮರೆಯಲಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಅವರ 50ನೇ ವರ್ಷದ ದಾಂಪತ್ಯಜೀವನದ ಸಂಭ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಸಹಾಯಧನ ನೀಡಿದ್ದರು.
ಹಲವಾರು ಮಂದಿಗೆ ಉದ್ಯೋಗ ನೀಡಿದ್ದ ಕೋಟ್ಯಾನ್: ಬೀಡಿ ಉದ್ಯಮ ಇಳಿಹಾದಿಯಲ್ಲಿ ಸಾಗುತ್ತಿದ್ದ ಸಂದರ್ಭ ಶುಭ ಬೀಡಿಗಳ ಹೆಸರಿನಲ್ಲಿ ಬೀಡಿ ಉದ್ಯಮವನ್ನು ಆರಂಭಿಸಿ ಸಹಸ್ರಾರು ಮಂದಿಗೆ ಕೋಟ್ಯಾನ್ ಉದ್ಯೋಗದಾತರಾಗಿದ್ದರು. ಇಷ್ಟಕ್ಕೆ ನಿಲ್ಲದೆ ಶುಭಲಕ್ಷ್ಮಿ ಟ್ರಾವೆಲ್ಸ್ ಮೂಲಕ ಬಸ್ ಉದ್ಯಮವನ್ನೂ ಆರಂಭಿಸಿ, ಹಳ್ಳಿಪ್ರದೇಶದ ಜನರಿಗೆ ನೆರವಾದರು. ಅಲ್ಲದೆ ಸಿಹಿ ಪಾನೀಯ ಘಟಕ, ಶುಭಲಕ್ಷ್ಮೀ ಆಡಿಟೋರಿಯಂ ಸಭಾಂಗಣವನ್ನು ಆರಂಭಿಸಿದ್ದಾರೆ. ಕೊಡುಗೈ ದಾನಿಯಾಗಿದ್ದ ಇವರು, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು.
ಇದನ್ನು ಓದಿ:ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆ ಇರಲಿ: ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರಿಗೆ ಪ್ರಧಾನಿ ಮೋದಿ ಸಲಹೆ
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದರು: ಸತತ 26 ವರ್ಷಗಳಿಂದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದರು. ಪಚ್ಚಿನಡ್ಕದ ಆದಿ ಮೊಗೇರ್ಕಳ ಕೊರಗಜ್ಜ ಕ್ಷೇತ್ರ, ಕೈಕಂಬ ಶ್ರೀ ಕ್ಷೇತ್ರ ಪೊಳಲಿ ದ್ವರದ ನಿರ್ಮಾಣ, ಅಮ್ಟಾಡಿ ನಲ್ಕೆಮಾರ್ ಶ್ರೀ ಮಾಂಗ್ಲಿಮಾರ್ ದೈವಸ್ಥಾನದ ದ್ವಾರದ ನಿರ್ಮಾಣ, ಪಾಳುಬಿದ್ದ ಪಡೆಂಕ್ಲಿಮಾರ್ ಕಲ್ಲುರ್ಟ್ಟಿ ದೈವಸ್ಥಾನದ ಮುಂತಾದ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದ ಅವರು, ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿದ್ದರು.
ಕೊರೊನಾ ವೇಳೆ ಬಡವರಿಗೆ ನೆರವು: ಕೊರೊನಾ ಸಂದರ್ಭ 1500 ಕುಟುಂಬಗಳಿಗೆ 25 ಕೆಜಿ ಅಕ್ಕಿ ಮತ್ತು ತಲಾ 500 ರೂಗಳಂತೆ ನೀಡಿ ನೆರವಾದವರು. ಓಂ ಫ್ರೇಂಡ್ಸ್ ಪಚ್ಚಿನಡ್ಕದ ಗೌರವಾಧ್ಯಕ್ಷರಾಗಿ, ಕಲ್ಲುರ್ಟಿ ದೈವಸ್ಥಾನ ಪಡೆಂಕ್ಲಿಮಾರ್ ಗೌರವಾಧ್ಯಕ್ಷರಾಗಿ, ಪಚ್ಚಿನಡ್ಕ ಆದಿ ಮೊಗೆರ್ಕಳ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರಾಗಿ, ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಮಾಜಸೇವೆಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು ಎಂಬುದು ವಿಶೇಷವಾಗಿದೆ. ಆದರೆ, ಇನ್ನೂ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜಕ್ಕೆ ಕೊಡುಗೆ ನೀಡುವ ಸಮಯದಲ್ಲಿ ಇಂದು ಇಹಲೋಕ ತ್ಯಜಿಸಿರುವುದು ದುಃಖಕರ ಸಂಗತಿ.
ಇದನ್ನೂ ಓದಿ : ಜೀವನ ಸಾಕ್ಷಾತ್ಕಾರಕ್ಕೆ ಕರ್ಮ, ಭಕ್ತಿ, ಜ್ಞಾನದ ದಾರಿ ತೋರಿದವರು ಬಾಲಗಂಗಾಧರನಾಥ ಶ್ರೀ: ನಿರ್ಮಲಾನಂದನಾಥ ಸ್ವಾಮೀಜಿ