ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೋಮೇಶ್ವರದ ಸೋಮೇಶ್ವರ ದೇವಾಲಯದಲ್ಲಿ ಆಳುಪ ಚಕ್ರವರ್ತಿ ಮೊದಲನೇ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಕಂಡು ಬಂದಿದೆ ಎಂದು ಕರಾವಳಿಯ ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಆಯತಾಕಾರದ ಶಿಲೆಯ ಮೇಲೆ ಎರಡು ಆಕರ್ಷಕ ಚಿತ್ರಪಟ್ಟಿಕೆಗಳಿದ್ದು ಆ ಚಿತ್ರಪಟ್ಟಿಕೆಗಳ ನಡುವಿನ ಪಟ್ಟಿಯ ಮೇಲೆ ಶಾಸನದ ಪ್ರಥಮ ಸಾಲನ್ನು ಬರೆಯಲಾಗಿದೆ. ನಂತರ ಚಿತ್ರಪಟ್ಟಿಕೆಯ ಕೆಳಭಾಗದಲ್ಲಿ 11 ಸಾಲುಗಳ ಶಾಸನವನ್ನು ಬರೆಯಲಾಗಿದೆ. ಶಾಸನದ ಮೊದಲನೇ ಸಾಲಿನಲ್ಲಿ ಸೋಮೇಶ್ವರ ದೇವಾಲಯದ ಸೋಮೇಶ್ವರ ಸೋಮಪ್ರಭು ಇಲ್ಲಿ ನೆಲೆಸಿದ್ದಾನೆ ಎಂದು ಸ್ತುತಿಸಲಾಗಿದೆ. ನಂತರ ಮೊದಲನೇ ಕುಲಶೇಖರನನ್ನು ಸೋಮಕುಲತಿಲಕ, ಪಾಂಡ್ಯ ಮಹಾರಾಜಾಧಿ ರಾಜ, ಪರಮೇಶ್ವರ, ಪರಮಭಟ್ಟಾರಕನೆಂದು ವರ್ಣಿಸಲಾಗಿದೆ. ತದನಂತರ ಶಾಸನದ 5 ಮತ್ತು 6ನೇ ಸಾಲಿನಲ್ಲಿ ಶ್ರೀಮತ್ಕುಲಸೇಕರಾಳ್ವರನನಳುಪಿದ ಅಂದರೆ ಮರಣ ಹೊಂದಿದ ಎಂದು ಉಲ್ಲೇಖಿಸಲಾಗಿದೆ. ಅವನ ಮರಣದ ತರುವಾಯ ಸಿರಿದೇವಯ್ಯ ಎಂಬುವನು ದಲ್ಯ ಛತ್ತರ ಅಂದರೆ ರಾಜಲಾಂಛನ ಸೂಚಕವಾದ ಬಿಳಿಕೊಡೆಯನ್ನು ಕಿತ್ತ. ಕೆಸವನ ಬಹುಶಃ ಕೇಶವಣ್ಣ ಎಂಬುವನು ಈ ಶಾಸನದ ಕೈಯನ್ನು ಮಾಡಿಸಿದ ಎಂದು ವಿವರಿಸಲಾಗಿದೆ. ಶಾಸನದ ಕೊನೆಯ ಎರಡು ಸಾಲುಗಳ ಅರ್ಥ ಸ್ಪಷ್ಟವಾಗಿಲ್ಲ.
ಶಾಸನದ ಚಿತ್ರಿತ ಪಟ್ಟಿಕೆಗಳು : ಶಾಸನದ ಮೇಲ್ಭಾಗದಲ್ಲಿ ಆಕರ್ಷಕವಾದ ಎರಡು ಚಿತ್ರಪಟ್ಟಿಕೆಗಳಿದ್ದು ಕೆಳಗಿನ ಪಟ್ಟಿಕೆಯಲ್ಲಿ ಕುಲಶೇಖರ ಆಳುಪೇಂದ್ರನನ್ನು ಬಲಗೈಯಲ್ಲಿ ಖಡ್ಗವನ್ನು ಹಿಡಿದು, ಎಡಗೈಯನ್ನು ಗುರಾಣಿಯ ಮೇಲೆ ಊರಿ ತ್ರಿಭಂಗಿಯಲ್ಲಿ ನಿಂತಿರುವಂತೆ ಚಿತ್ರಿಸಲಾಗಿದೆ. ಆತನ ಎಡಭಾಗದಲ್ಲಿ ಕೀರ್ತಿಸ್ಥಂಭವಿದೆ. ಕೀರ್ತಿಸ್ಥಂಭದ ಪಕ್ಕದಲ್ಲಿ ಪದ್ಮಾಸನದಲ್ಲಿ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಂತೆ ರಾಜನನ್ನು ಚಿತ್ರಿಸಲಾಗಿದೆ. ಈ ಎರಡೂ ಶಿಲ್ಪಗಳ ಕೇಶಾಲಂಕಾರ ಹಾಗು ಆಭರಣಗಳು ಒಂದೇ ತೆರನಾಗಿವೆ.
ಮೇಲಿನ ಪಟ್ಟಿಕೆಯ ಮಧ್ಯಭಾಗದಲ್ಲಿ ಸುಖಾಸೀನ ಭಂಗಿಯಲ್ಲಿ ಕುಳಿತಿರುವಂತೆ ಸೋಮೇಶ್ವರನನ್ನು ಮಾನವರೂಪದಲ್ಲಿ ಚಿತ್ರಿಸಲಾಗಿದೆ. ಬಲಭಾಗದಲ್ಲಿ ಬೀಜಫಲವನ್ನು ಹಿಡಿದು ತ್ರಿಭಂಗಿಯಲ್ಲಿ ಉಮೆ ನಿಂತಿರುವಂತೆ ಚಿತ್ರಿಸಲಾಗಿದೆ. ಸೋಮೇಶ್ವರನ ಎಡಭಾಗದಲ್ಲಿ ಕುಲಶೇಖರ ಆಳುಪೇಂದ್ರನು ಅಂಜಲೀಬದ್ಧನಾಗಿ ನಿಂತಿರುವಂತೆ ಚಿತ್ರಿಸಲಾಗಿದೆ.
ಶಾಸನದ ಮಹತ್ವ : ಆಳುಪ ಚಕ್ರವರ್ತಿ ಒಬ್ಬನ ಮರಣವನ್ನು ದಾಖಲಿಸಿದ ಮೊಟ್ಟಮೊದಲ ಶಾಸನವಿದು. ಆದರೆ ಶಾಸನದಲ್ಲಿ ಕಾಲವನ್ನು ಉಲ್ಲೇಖಿಸಿಲ್ಲ, ಲಿಪಿ ಲಕ್ಷಣದ ಆಧಾರದ ಮೇಲೆ ಶಾಸನದ ಕಾಲವನ್ನು 12ನೇ ಶತಮಾನದ ಶಾಸನವೆಂದು ನಿರ್ಧರಿಸಬಹುದಾಗಿದೆ. ಶಾಸನದಲ್ಲಿ ಸಿರಿಪಾಡ್ದನದಲ್ಲಿ ಬರುವ ಸಿರಿ, ದಲ್ಯ ಮತ್ತು ಛತ್ರಗಳ ಉಲ್ಲೇಖ ಸಿರಿಯ ಪ್ರಾಚೀನತೆಯ ಅಧ್ಯಯನದ ದೃಷ್ಠಿಯಿಂದ ಬಹಳ ಮಹತ್ವದ್ದಾಗಿದೆ.
ಮೊದಲನೇ ಕುಲಶೇಖರ ಆಳುಪೇಂದ್ರನು ಕ್ರಿ.ಶ.1156 ರಿಂದ ಕ್ರಿ.ಶ. 1215 ರವರೆಗೆ ತುಳುನಾಡನ್ನು ಸ್ವತಂತ್ರ ಚಕ್ರವರ್ತಿಯಾಗಿ ಆಳ್ವಿಕೆ ಮಾಡಿದ. ತನ್ನ ಹೆಸರಿನಲ್ಲಿಯೇ ಒಂದು ಹೊಸ ನಗರವನ್ನು ಮಂಗಳೂರಿನಲ್ಲಿ ನಿರ್ಮಾಣ ಮಾಡಿದ. ಕುಲಶೇಖರದಲ್ಲಿ ಆತ ಭುವನಾಶ್ರಯ ಎಂಬ ಅರಮನೆಯನ್ನು ನಿರ್ಮಿಸಿದ್ದ. ಆತ ನಿರ್ಮಿಸಿದ ಕೀರ್ತಿಸ್ಥಂಭ ಕುಲಶೇಖರದ ಚರ್ಚ್ ಒಳಭಾಗದಲ್ಲಿ ಇದ್ದು ಅದರ ಪ್ರತಿರೂಪವನ್ನು ಈ ಶಾಸನದಲ್ಲಿ ಚಿತ್ರಿಸಲಾಗಿದೆ. ತುಳುನಾಡಿನ ದೇವಾಲಯಗಳ ಆಡಳಿತಕ್ಕೆ ಸ್ಪಷ್ಟ ನೀತಿ ನಿಯಮಗಳನ್ನು ಜಾರಿಗೊಳಿಸಿದ್ದು ಈತನೇ. ತುಳು ಭಾಷೆ ಮತ್ತು ಲಿಪಿಗೆ ರಾಜಾಶ್ರಯವನ್ನು ನೀಡಿದ ದೊರೆ ಮೊದಲನೇ ಕುಲಶೇಖರ ಆಳುಪೇಂದ್ರ.
ಸೋಮ ಪಂಥ : ಸೋಮ ಪಂಥವನ್ನು ಗುಜರಾತಿನ ಸೋಮಶರ್ಮ ಎಂಬಾತನು ಕ್ರಿ.ಶ. 11 ನೇ ಶತಮಾನದಲ್ಲಿ ಸ್ಥಾಪಿಸಿದ. ಕೆಲವೇ ವರ್ಷಗಳಲ್ಲಿ ಈ ಪಂಥ ದೇಶದೆಲ್ಲೆಡೆ ಜನಪ್ರಿಯವಾಯಿತು. ತುಳುನಾಡಿನಲ್ಲಿ ಈ ಪಂಥಕ್ಕೆ ರಾಜಾಶ್ರಯ ನೀಡಿದ ಕುಲಶೇಖರ ಆಳುಪೇಂದ್ರ, ಸೋಮೇಶ್ವರದಲ್ಲಿ ಸೋಮೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ. ಆ ದೇವಾಲಯದಲ್ಲಿ ಸೋಮೇಶ್ವರನ ಜೊತೆ ನವದುರ್ಗೆಯರ ಆಕರ್ಷಕ ಬಿಡಿ ಶಿಲ್ಪಗಳಿವೆ.
ಈ ಶಾಸನದ ಅಧ್ಯಯನದಲ್ಲಿ ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿ ಅವರಿಗೆ ಚಿತ್ರದುರ್ಗದ ಡಾ.ಬಿ. ರಾಜಶೇಖರಪ್ಪನವರು ಶಾಸನದ ಪಠ್ಯ ಪರಿಷ್ಕರಣೆಯಲ್ಲಿ ನೆರವಾಗಿದ್ದಾರೆ. ಈ ಶಾಸನವನ್ನು ಅರ್ಥೈಸುವಲ್ಲಿ ಡಾ. ಇಂದಿರಾ ಹೆಗ್ಡೆ ಮತ್ತು ಡಾ.ವೈ.ಎನ್. ಶೆಟ್ಟಿ ಪಡುಬಿದ್ರೆ ಇವರು ನೆರವಾಗಿದ್ದಾರೆ. ಈ ಶಾಸನದ ಸಂಶೋಧನೆಯಲ್ಲಿ ಶ್ರೇಯಸ್ ಮಣಿಪಾಲ್, ಶ್ರೇಯಸ್ ಬಂಟಕಲ್ಲು, ಗೌತಮ್ ಬೆಳ್ಮಣ್ ಮತ್ತು ರವೀಂದ್ರ ಕುಶ್ವಾ ಹಾಗೂ ದೇವಾಲಯದ ಆಡಳಿತವರ್ಗದವರು ನೆರವು ನೀಡಿದ್ದಾರೆ.
ಶಾಸನದ ಪಾಠ ಈ ಕೆಳಗಿನಂತಿದೆ :
1. ಸಸ್ವಸ್ತಿ ಸೋಮಪ್ರಭು ವಧಿಷ್ಠಿತ
2. ಸೋಮಕುಲ ತಿಲಕ ಪಾಣ್ಡಯ್ಂ
3. ಮಹಾ ರಾಜಾಧಿ ರಾಜ ಪ
4. ರಮೇಸ್ವರ ಪರಮ ಭಟ್ಟಾ
5. ರಕರಪ್ಪ ಶ್ರೀಮತ್ಕುಲಸೇ
6. ಕರಾಳ್ವರನ ನಳುಪಿದ ಕಿಳ್ದ
7. ಸಿರಿದೇವಯ ದಲ್ಯ
8. ಛತ್ತರಳು..........ಳಪಿ.
9. ಕೆಸವನ ಕೈಯ......
10. ಮಾಡಿ ಬಿಟ್ಟ......
11. ಅ ಉರ ಜನರ ಕೆಷ
12. ರ ಮಾಗೆ.
ಇದನ್ನೂ ಓದಿ : ಸಜೀಪಮೂಡದಲ್ಲಿ ಪುರುಷಾಮೃಗದ ಅಪರೂಪದ ಶಿಲ್ಪವುಳ್ಳ ಬಂಗರಸನ ಶಾಸನ