ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ 78 ವರ್ಷದ ಮಹಿಳೆ ಕೋವಿಡ್-19ನಿಂದ ಮೃತಪಟ್ಟ ಬಳಿಕ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸೋಂಕಿತ ವ್ಯಕ್ತಿಯ ಮೃತದೇಹವನ್ನು ಹೂಳುವುದು ಅಥವಾ ದಹನ ಮಾಡುವ ಮೂಲಕ ಅಂತ್ಯಕ್ರಿಯೆ ಜರುಗಿಸಬಹುದು. ಹೀಗೆ ದಹಿಸಿದ ಅಥವಾ ದಫನ ಮಾಡಿದ ದೇಹದ ಬೂದಿಯಿಂದ ಮತ್ತೊಬ್ಬರಿಗೆ ಯಾವುದೇ ವೈರಾಣು ಹರಡುವುದಿಲ್ಲ. ಈ ಬೂದಿಯನ್ನು ಸಂಗ್ರಹಿಸಿ ಇತರ ಧಾರ್ಮಿಕ ಆಚರಣೆಗಳನ್ನೂ ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.
ತಪ್ಪು ಕಲ್ಪನೆಯಿಂದ ಅಂತ್ಯಸಂಸ್ಕಾರಕ್ಕೆ ಅಡ್ಡಿ:
ಕೊರೊನಾ ಸೋಂಕಿತರ ಮೃತದೇಹದಿಂದ ಸೋಂಕು ಹರಡಿರುವ ಬಗ್ಗೆ ನಿದರ್ಶನಗಳಿಲ್ಲ. ಹಾಗಾಗಿ ಜನರಿಗೆ ಆತಂಕ ಬೇಡ. ಕೊರೊನಾ ಸೋಂಕಿನಿಂದ ಮೃತರಾದವರ ಅಂತ್ಯಸಂಸ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿ ಕೊರತೆ ಮತ್ತು ತಪ್ಪು ಕಲ್ಪನೆಯಿದೆ. ಕೆಲವು ಕಡೆ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಕೊರೊನಾ ಸೋಂಕಿತರು ಮೃತಪಟ್ಟಾಗ ಅವರ ಅಂತ್ಯಸಂಸ್ಕಾರದ ಬಗ್ಗೆ ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಮಾನ್ಯ ಎಚ್ಚರಿಕೆಯನ್ನು ಪಾಲಿಸುವ ಮೂಲಕ ಶವಸಂಸ್ಕಾರ ಮಾಡಬಹುದು ಎಂದು ಡಿಸಿ ವಿವರಿಸಿದ್ದಾರೆ.
ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೊನಾದಿಂದ ಸಮಸ್ಯೆ ಇಲ್ಲ:
ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೊನಾದಿಂದ ಮೃತಪಟ್ಟವರ ದೇಹಗಳಿಂದ ಯಾವುದೇ ವಿಶೇಷ ಅಪಾಯವಿಲ್ಲ. ಅವರು ಕೈಗಳನ್ನು ಮುಚ್ಚಿ, ಕಾಲುಚೀಲ, ಮುಖ ಕವಚ ಹಾಗೂ ಕೈಗಳನ್ನು ತೊಳೆದುಕೊಳ್ಳುವಂತಹ ಸಾಮಾನ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಸೋಂಕಿತ ಮೃತನ/ಳ ದೇಹವನ್ನು ಸಂಬಂಧಿಕರು ದೂರದಿಂದ ವೀಕ್ಷಿಸಬಹುದಾಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಿಸಲು ಅವಕಾಶ ನೀಡಬಹುದು. ಆದರೆ, ಮೃತದೇಹವನ್ನು ಮುಟ್ಟುವುದಾಗಲಿ, ಮುತ್ತಿಕ್ಕುವುದು ಅಥವಾ ತಬ್ಬಿಕೊಳ್ಳುವುದಕ್ಕೆ ಅವಕಾಶವಿಲ್ಲ. ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಕುಟುಂಬದ ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಗ್ರಂಥಗಳ ಪಠಣ, ಪವಿತ್ರ ನೀರನ್ನು ಸಿಂಪಡಿಸುವುದು ಇತ್ಯಾದಿಗಳನ್ನು ದೇಹವನ್ನು ಮುಟ್ಟದೇ ಮಾಡಲು ಅವಕಾಶವಿರುತ್ತದೆ. ಕೊರೊನಾ ಸೋಂಕಿತರು ಮೃತರಾಗುವ ಮೊದಲು ಅವರ ಸಂಪರ್ಕಕ್ಕೆ ಬಂದಿದ್ದ ಬಂಧು ಬಳಗದವರಿಗೆ ಮೊದಲೇ ರೋಗಾಣು ಹರಡಿರುವ ಸಾಧ್ಯತೆ ಇರುತ್ತದೆ. ಅಂತ್ಯಸಂಸ್ಕಾರದಲ್ಲಿ ಮನೆಮಂದಿ ಭಾಗಿಯಾಗುತ್ತಾರೆಂಬ ಕಾರಣಕ್ಕೆ ಅವರಿಂದ ಇತರರಿಗೆ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದಲೇ ಅಂತ್ಯಸಂಸ್ಕಾರದ ವೇಳೆ ಹೆಚ್ಚು ಜನರಿರಬಾರದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದು ಕೊಳ್ಳಬೇಕೆಂದು ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.