ಮಂಗಳೂರು: ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ವಿಕ್ರಮ್ ಗಟ್ಟಿ ಎಂಬುವರ ಮೃತದೇಹವು ಉಳಿಯದಲ್ಲಿ ಪತ್ತೆಯಾಗಿದೆ.
ಬುಧವಾರ ತಡರಾತ್ರಿ ನೇತ್ರಾವತಿ ಸೇತುವೆಯಲ್ಲಿ ವಿಕ್ರಮ್ ಅವರ ಕಾರು ಪತ್ತೆಯಾಗಿತ್ತು. ಈ ಹಿನ್ನೆಲೆ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿಂದ, ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ಅವರ ಮೃತದೇಹ ಉಳ್ಳಾಲದ ಉಳಿಯದಲ್ಲಿ ಪತ್ತೆಯಾಗಿದೆ.
ಮೂಲತಃ ಸೋಮೇಶ್ವರ ಸಮೀಪದ ಕೊಲ್ಯದ ಪ್ರಸ್ತುತ ಕೊಣಾಜೆ ಪುಳಿಂಚಾಡಿ ನಿವಾಸಿಯಾಗಿರುವ ವಿಕ್ರಂ ಗಟ್ಟಿ, ಕೊಲ್ಯದಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ಐದು ವರ್ಷಗಳ ಹಿಂದೆ ನರಿಂಗಾನ ವಿದ್ಯಾನಗರದ ಬಸ್ ಚಾಲಕ ಸತೀಶ್ ಗಟ್ಟಿಯವರ ಪುತ್ರಿ ಪ್ರತೀಕ್ಷಾ ಗಟ್ಟಿಯವರನ್ನು ವಿವಾಹವಾಗಿದ್ದು, ಇವರಿಗೆ ನಾಲ್ಕು ವರ್ಷದ ಪುತ್ರ ಇದ್ದಾನೆ. ಒಂದೂವರೆ ವರ್ಷದ ಹಿಂದೆ ಕೊಣಾಜೆಯ ಪುಳಿಂಚಾಡಿ ಬಳಿ ಪ್ರತೀಕ್ಷಾ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ನಿರ್ಮಿಸಿ ಅಲ್ಲೇ ಕುಟುಂಬ ಸಮೇತ ವಾಸವಾಗಿದ್ದರು.
ಏಪ್ರಿಲ್ 15ರಂದು ರಾತ್ರಿ 9 ಗಂಟೆಗೆ ಮನೆಯಿಂದ ಹೋಗಿದ್ದರು. ಬಳಿಕ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಬಂದಿತ್ತು. ಇನ್ನು ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.