ಮಂಗಳೂರು: ಬೆಂಗಳೂರು ಮೂಲದ ಮಧ್ಯವಯಸ್ಕ ಪುರುಷ ಹಾಗೂ ಮಹಿಳೆಯ ಮೃತದೇಹ ಇಲ್ಲಿನ ಪಣಂಬೂರು ಕಡಲ ತೀರದಲ್ಲಿ ಪತ್ತೆಯಾಗಿದೆ. ಬೆಂಗಳೂರು ಮೂಲದ ಲಕ್ಷ್ಮಿ (43) ಮತ್ತು ಬೋರಲಿಂಗಯ್ಯ (50) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಬೆಂಗಳೂರು ನಿವಾಸಿಗಳಾಗಿದ್ದ ಇವರು ಮನೆಯಲ್ಲಿ ಯಾರಿಗೂ ತಿಳಿಸದೆ ಬಂದಿದ್ದರು ಎನ್ನುವ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ನಿನ್ನೆ ಬೆಂಗಳೂರಿನಿಂದ ಆಗಮಿಸಿದ್ದ ಇವರ ಮೃತದೇಹ ಗುರುವಾರ ಬೆಳಗ್ಗೆ ಸಮುದ್ರದ ಕಿನಾರೆಯಲ್ಲಿ ಪತ್ತೆಯಾಗಿದೆ. ಇವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇವರಿಬ್ಬರ ನಡುವಿನ ಸಂಬಂಧವೇನು ಎಂಬ ಮಾಹಿತಿಯಿಲ್ಲ. ಸಂಬಂಧಿಕರು ಸುದ್ದಿ ಕೇಳಿ ಆತಂಕಗೊಂಡಿದ್ದು, ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮೊಬೈಲ್ ಸಮುದ್ರ ದಂಡೆಯಲ್ಲಿ ಪತ್ತೆಯಾಗಿದ್ದರಿಂದ ಪಣಂಬೂರು ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ಸ್ಥಳೀಯರು ಮೇಲೆತ್ತಿದ್ದು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಇತ್ತೀಚಿನ ಪ್ರಕರಣ- ಮಗಳ ಜೊತೆ ತಾಯಿ ಆತ್ಮಹತ್ಯೆ: ತನ್ನ 5 ವರ್ಷದ ಮಗಳೊಂದಿಗೆ ತಾಯೊಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ನಡೆದಿತ್ತು. ಕವಿತಾ (27) ಹಾಗೂ ಅವರ ಮಗಳು ಆತ್ಮಹತ್ಯೆ ಶರಣಾದವರು. ಕೆಲ ದಿನಗಳಿಂದ ಮಗಳೊಂದಿಗೆ ಕವಿತಾ ಕಾಣೆಯಾಗಿದ್ದಳು.
ಪತಿ ಮಂಜುನಾಥನು ತನ್ನ ಪತ್ನಿ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಆದರೆ ದುರಂತ ಎಂದರೆ ಸೂಳೆಕೆರೆಯಲ್ಲಿ ತಾಯಿ ಹಾಗೂ ಮಗಳ ಮೃತದೇಹ ಪತ್ತೆಯಾಗಿತ್ತು. ಆರು ವರ್ಷಗಳ ಹಿಂದೆ ಮಂಜುನಾಥನನ್ನು ಮದುವೆಯಾಗಿದ್ದ ಕವಿತಾಗೆ ಕಳೆದ ಕೆಲವು ವರ್ಷಗಳಿಂದ ಪತಿ ಹಾಗೂ ಅವರ ಮನೆಯವರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪವೂ ಕೇಳಿ ಬಂದಿತ್ತು. ಈ ವಿಚಾರಕ್ಕೆ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನವನ್ನು ಕವಿತಾ ಕುಟುಂಬದವರು ವ್ಯಕ್ತಪಡಿಸಿದ್ದರು.
ಜೊತೆಗೆ ಕವಿತಾ ಅವರ ತವರು ಮನೆಯವರು ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ಪೊಲೀಸ್ ಠಾಣೆಯಲ್ಲಿ ಮಂಜುನಾಥ ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ : ಹುಬ್ಬಳ್ಳಿ: ಸಾಲಬಾಧೆಗೆ ಬೇಸತ್ತು ಉದ್ಯಮಿ ಆತ್ಮಹತ್ಯೆ