ಮಂಗಳೂರು: ಕೇವಲ ಕ್ಲಬ್ ಬದಲಾವಣೆಯನ್ನು ಗುರಿಯಾಗಿರಿಸಿ ಕೋಚ್ ಹಾಗೂ ಆಯ್ಕೆಯ ಸೂತ್ರಧಾರ ಜಯರಾಜ್ ಮುತ್ತು ಅವರ ಹುನ್ನಾರದಿಂದ ಮಂಗಳೂರು ಝೋನ್ 19ರೊಳಗಿನ ಕ್ರಿಕೆಟ್ ಸೆಲೆಕ್ಷನ್ನಲ್ಲಿ ಕ್ರಿಕೆಟರ್ ರವೀಂದ್ ಸುಧೀರ್ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಈ ಮೂಲಕ ಪ್ರತಿಭಾನ್ವಿತ ಯುವ ಕ್ರಿಕೆಟ್ ಆಟಗಾರನ ಭವಿಷ್ಯವನ್ನು ಚಿವುಟಿ ಹಾಕಲಾಗುತ್ತಿದೆ ಎಂದು ಮಾಜಿ ಗೋವಾ ರಣಜಿ ಆಟಗಾರ ದಯಾನಂದ ಬಂಗೇರ ಆರೋಪಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ತಂಡಕ್ಕೆ ಕ್ರಿಕೆಟರ್ಗಳನ್ನು ಆಯ್ಕೆ ಮಾಡುವಾಗ ಸ್ಥಳದಲ್ಲಿಯೇ 3-4 ಬಾಲ್ ಕ್ರಿಕೆಟ್ ಆಡಿಸಿ ಆ ಸಂದರ್ಭದ ಅವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಆಟಗಾರರ ಆಯ್ಕೆ ನಡೆಸಲಾಗುತ್ತದೆ. ಈ ರೀತಿಯ ಆಯ್ಕೆಯನ್ನು ಒಪ್ಪುವಂತಿಲ್ಲ ಎಂದು ಹೇಳಿದರು.
ನಿಯಮ ಪ್ರಕಾರ ಸೆಲೆಕ್ಷನ್ ಸಂದರ್ಭದಲ್ಲಿ ಟ್ರಯಲ್ಸ್ಗೆಂದು ಕ್ರಿಕೆಟರ್ಗಳನ್ನು ಕರೆಯುವಂತಿಲ್ಲ. ಆಯ್ಕೆಯ ಸಮಿತಿಯಲ್ಲಿ ಮಂಗಳೂರಿನಲ್ಲಿ 19ರೊಳಗೆ ಆಡುವ ಎಲ್ಲ ಮಕ್ಕಳ ಕಾರ್ಯಕ್ಷಮತೆಯ ಪಟ್ಟಿ ಇರಬೇಕು. ಅದರ ಆಧಾರದ ಮೇಲೆ ತಂಡಕ್ಕೆ ಕ್ರಿಕೆಟರ್ಗಳ ಆಯ್ಕೆ ನಡೆಯಬೇಕು. ಆದರೆ ಆಯ್ಕೆಯ ಸಮಿತಿ ತಪ್ಪು ವಿಧಾನಗಳ ಮೂಲಕ ಕ್ರಿಕೆಟ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿ ಮಕ್ಕಳ ಕ್ರಿಕೆಟ್ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ಇದರಿಂದ ಆಯ್ಕೆಯ ಸಮಿತಿ ಸ್ಥಳೀಯ ಪ್ರತಿಭೆಗಳನ್ನು ರಾಷ್ಟ್ರಮಟ್ಟದಲ್ಲಿ ಬೆಳಗಲು ಬಿಡದೆ ಅಡ್ಡಗಾಲು ಇಡುತ್ತಿದ್ದಾರೆ ಎಂದು ಹೇಳಿದರು.
ಯಾವ ಕ್ರಿಕೆಟ್ ಕ್ಲಬ್ನಲ್ಲಿ ಕಲಿಯಬೇಕು ಎನ್ನುವುದು ಆಟಗಾರರ ಆಯ್ಕೆ, ಅವರು ಕ್ಲಬ್ ಬಿಟ್ಟರೆಂದು ಈ ರೀತಿಯಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳಬಾರದು. ಇದರಿಂದ ಪ್ರತಿಭಾನ್ವಿತ ಆಟಗಾರರ ಭವಿಷ್ಯವೇ ಕಮರಿ ಹೋಗುತ್ತದೆ. ಇದೇ ರೀತಿ ಅನೇಕ ಮಂದಿ ಮಕ್ಕಳಿಗೆ ದ್ರೋಹವಾಗಿದ್ದು, ಅವರನ್ನು ಈ ಸುದ್ದಿಗೋಷ್ಠಿಗೆ ಕರೆದಿದ್ದೆವು. ಆದರೆ ಅವರು ಭವಿಷ್ಯಕ್ಕೆ ಹೆದರಿ ಬಂದಿಲ್ಲ. ಆದರೂ ನಾನು ರಾಜ್ಯದ ಹಿರಿಯ ಕ್ರಿಕೆಟ್ ಆಟಗಾರ ರೋಜರ್ ಬಿನ್ನಿ, ಕೆಎಸ್ಸಿಎ ಅಧ್ಯಕ್ಷ ಸಂತೋಷ್ ಮೆನನ್ ಅವರಿಗೆ ಈಗಾಗಲೇ ಈಮೇಲ್ ಮೂಲಕ ಪತ್ರ ಬರೆದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ದಯಾನಂದ ಬಂಗೇರ ಹೇಳಿದರು.