ಮಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ದೈಹಿಕವಾಗಿ ಹಾಗೂ ಮಾನಸಿಕ ಕಿರುಕುಳ ನೀಡಿದ್ದಲ್ಲದೆ ಹತ್ಯೆಗೈಯುವ ಉದ್ದೇಶದಿಂದ ಚಾಕುವಿನಿಂದ ತಿವಿದಿದ್ದ ನೃತ್ಯ ತರಬೇತುದಾರನಿಗೆ 18 ವರ್ಷ 1 ತಿಂಗಳ ಕಠಿಣ ಶಿಕ್ಷೆ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ ಪಿ ಅವರು ತೀರ್ಪು ನೀಡಿದ್ದಾರೆ.
ಶಿಕ್ಷೆಗೊಳಗಾದ ನೃತ್ಯ ತರಬೇತುದಾರ ಶಕ್ತಿನಗರ ನಿವಾಸಿಯಾಗಿದ್ದಾರೆ. ಈತ ಕಾರ್ಕಳದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಇದರಿಂದ ಹತಾಶನಾಗಿದ್ದ ಆರೋಪಿ ಜೈಲಿನಿಂದ ಜಾಮೀನು ಪಡೆದ ಬಳಿಕ 2019ರ ಜೂನ್ 28ರಂದು ಸಂಜೆ 4:30ಕ್ಕೆ ವಿದ್ಯಾರ್ಥಿನಿಯನ್ನು ಕೊಲೆಗೈಯ್ಯುವ ಉದ್ದೇಶದಿಂದ ಸ್ಕೂಟರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಹಿಂಬದಿಯ ಶಾಂತಿಧಾಮದ ಬಳಿ ವಿದ್ಯಾರ್ಥಿನಿಯನ್ನು ತಡೆದು ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಚೂರಿಯಿಂದ ತಿವಿದಿದ್ದ. ಇದರಿಂದ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ಅದೇ ಚೂರಿಯಿಂದ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಎಸ್ಐ ಗುರಪ್ಪಕಾಂತಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.
ಅಪರಾಧಿಗೆ ಐಪಿಸಿ ಸೆಕ್ಷನ್ 341ರಡಿ 1 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 326ರಡಿ 7 ವರ್ಷಗಳ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ, ಐಪಿಸಿ ಸೆಕ್ಷನ್ 307ರಡಿ 10 ವರ್ಷಗಳ ಕಠಿಣ ಸಜೆ, ಐಪಿಸಿ ಸೆಕ್ಷನ್ 354ರಡಿ 1 ವರ್ಷಗಳ ಕಠಿಣ ಸಜೆ ಹಾಗೂ 10,000 ರೂ. ದಂಡ, ದಂಡ ಪಾವತಿಸಲು ವಿಫಲವಾದಲ್ಲಿ 2 ತಿಂಗಳ ಕಠಿಣ ಸಜೆ ಅನುಭವಿಸಲು ನ್ಯಾಯಾಲಯವು ಆದೇಶಿಸಿದೆ.
ಅಪರಾಧಿಗೆ ಎಲ್ಲಾ ಶಿಕ್ಷೆಗಳನ್ನು ಒಂದಾದ ನಂತರ ಒಂದರಂತೆ ವಿಧಿಸಲಾಗಿದೆ. ಅಪರಾಧಿ ಒಟ್ಟು 18 ವರ್ಷ 1 ತಿಂಗಳು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿವೆ. ಅಲ್ಲದೆ ದಂಡವನ್ನು ವಿಧಿಸಿದ್ದು, ದಂಡದ ಮೊತ್ತದಲ್ಲಿ 2 ಲಕ್ಷ ರೂ.ವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸಂತ್ರಸ್ತೆಯ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ದಾವಣಗೆರೆ: ಅಪ್ರಾಪ್ತೆಯ ಅತ್ಯಾಚಾರ, ಅಪರಾಧಿಗೆ 20 ವರ್ಷ ಶಿಕ್ಷೆ