ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಜು. 16ರಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಪುತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಾಕ್‌ಡೌನ್ ನಿಮಿತ್ತ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದ್ದರೂ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ದ್ವಿಚಕ್ರ ವಾಹನ, ಸರಕು ಸಾಗಾಟದ ವಾಹನ, ರಿಕ್ಷಾ ಹಾಗೂ ಕೆಲವೊಂದು ಅಗತ್ಯ ಖಾಸಗಿ ವಾಹನಗಳ ಓಡಾಟ ಬಿಟ್ಟರೆ ಉಳಿದಂತೆ ಬಸ್, ಟೂರಿಸ್ಟ್ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿವೆ.
ಸರ್ಕಾರಿ ಕಚೇರಿಗಳಾದ ರಾಷ್ಟ್ರೀಕೃತ ಬ್ಯಾಂಕ್ಗಳು, ಅಗತ್ಯ ಸೇವೆಗಳ ಕಚೇರಿಗಳ ಜೊತೆಗೆ ಕೆಲ ಖಾಸಗಿ ಹಣಕಾಸು ಸಂಸ್ಥೆಗಳು ತೆರೆದಿವೆ. ಆದರೆ ಅಲ್ಲೆಲ್ಲೂ ಹೆಚ್ಚು ಗ್ರಾಹಕರು ಮಾತ್ರ ಕಂಡು ಬರುತ್ತಿಲ್ಲ. ಜನರು ಅನಗತ್ಯ ಓಡಾಟ ನಡೆಸದೆ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲ ನೀಡಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ಒಳ ರಸ್ತೆಗಳು ಬಂದ್:
ಪುತ್ತೂರು ಪೇಟೆ ಪ್ರವೇಶಿಸುವ ಎಲ್ಲಾ ಒಳರಸ್ತೆಗಳನ್ನು ಬ್ಯಾರಿಕೇಡ್ ಇಟ್ಟು ಪೊಲೀಸರು ಬಂದ್ ಮಾಡಿದ್ದಾರೆ. ಮುಖ್ಯ ರಸ್ತೆಯ ಪ್ರಮುಖ ಜಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟು ಪೇಟೆಗೆ ಬರುವವರನ್ನು ವಿಚಾರಿಸಿ ಅನಗತ್ಯವಾಗಿ ಬರುವವರನ್ನು ಕಟ್ಟುನಿಟ್ಟಾಗಿ ವಾಪಸ್ ಮನೆಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ.