ಮಂಗಳೂರು: ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ.
ಎಲ್ಲಾ ವಾಣಿಜ್ಯ ಮಳಿಗೆಗಳು, ಮಾಲ್ಗಳು, ಬಾರ್, ವೈನ್ ಶಾಪ್ಗಳು, ಸಂಪೂರ್ಣ ಬಂದ್ ಆಗಿದ್ದು, ಮಾರುಕಟ್ಟೆ, ದಿನಸಿ ಅಂಗಡಿಗಳು 8 ರಿಂದ 11ರವರೆಗೆ ತೆರೆದಿದ್ದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ರಸ್ತೆಗಳಲ್ಲಿ ಜನಸಂಚಾರವೂ ಕಡಿಮೆಯಾಗಿದ್ದು, ಖಾಲಿ ಖಾಲಿಯಾದ ವಾತಾವರಣ ಕಂಡುಬರುತ್ತಿದೆ. ಹೆದ್ದಾರಿಗಳಲ್ಲಿ ಗೂಡ್ಸ್ ಲಾರಿಗಳು, ಸರಕು ಸಾಗಣೆಯ ಕೆಲವೇ ವಾಹನಗಳು ಮಾತ್ರ ಸಂಚರಿಸಿದವು.
ಬೆಳಗ್ಗೆ 8 ರಿಂದ 11ರವರೆಗೆ ಲಾಕ್ ಡೌನ್ ಸಡಿಲಿಕೆ ಇದ್ದು, ದಿನಸಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಸಂದರ್ಭ ಕೆಲವೊಂದು ಖಾಸಗಿ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿರುವ ದೃಶ್ಯ ಕಂಡು ಬಂದಿದ್ದರೂ, 11ರ ಬಳಿಕ ವಾಹನಗಳ ಓಡಾಟಕ್ಕೆ ಕಡಿವಾಣ ಬಿದ್ದಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಅನಗತ್ಯ ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದಾರೆ.
ಅಲ್ಲದೆ ಪೊಲೀಸರು ಅನಗತ್ಯ ಸಂಚಾರ ಮಾಡದಂತೆ ಅನೌನ್ಸ್ ಮಾಡುತ್ತಿದ್ದು, ಕೊರೊನಾ ಸೋಂಕಿನ ಬಗ್ಗೆಯೂ ಎಚ್ಚರಿಕೆ ನೀಡುತ್ತಿದ್ದಾರೆ. ಮೆಡಿಕಲ್, ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಅಲ್ಲದೆ ಬಂದ್ ನಡುವೆಯೇ ಆಶಾಕಾರ್ಯಾಕರ್ತೆಯರು ತಮ್ಮ ಕಾರ್ಯವನ್ನು ನಿರಾತಂಕವಾಗಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್ ಮಂಗಳೂರಿನಲ್ಲಿ ಯಶಸ್ವಿಯಾಗಿದೆ.