ಮಂಗಳೂರು: ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನ್ಯಾಪ್ಟಾಲ್ ಸಂಸ್ಥೆಯ ಹೆಸರಿನಲ್ಲಿ 12 ಲಕ್ಷ ರೂ. ಬಹುಮಾನ ಬಂದಿದೆ ಎಂದು 7.85 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ವ್ಯಕ್ತಿಗೆ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನ್ಯಾಪ್ಟಾಲ್ ಸಂಸ್ಥೆಯ ಹೆಸರಿನಲ್ಲಿ ರಿಜಿಸ್ಟರ್ ಪೋಸ್ಟ್ ಬಂದಿದ್ದು ಅದನ್ನು ತೆರೆದು ನೋಡಿದಾಗ ಸ್ಕ್ರ್ಯಾಚ್ ಕಾರ್ಡ್ ಮತ್ತು ಪತ್ರ ಲಭ್ಯವಾಗಿತ್ತು. ಅದರಲ್ಲಿ 12 ಲಕ್ಷ ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು.
ಪತ್ರದಲ್ಲಿದ್ದಂತೆ ಮಂಗಳೂರಿನ ವ್ಯಕ್ತಿ 9432582448 ನಂಬರ್ಗೆ ಸಂಪರ್ಕಿಸಿದ್ದು, ಅವರು ವಾಟ್ಸ್ಆ್ಯಪ್ನಲ್ಲಿ ಬ್ಯಾಂಕ್ ಖಾತೆ ವಿವರ ಮತ್ತು ವಿಳಾಸವನ್ನು ಕಳುಹಿಸಲು ಸೂಚಿಸಿದ್ದರು. ಬಳಿಕ ಮಂಗಳೂರಿನ ವ್ಯಕ್ತಿಗೆ ಪ್ರದೀಪ್ ಪೂಜಾರಿ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ಬಹುಮಾನದ ಹಣ ಪಡೆಯಲು 46 ಸಾವಿರ ಮತ್ತು ಇತರ ಶುಲ್ಕ ಪಾವತಿಸಲು ಸೂಚಿಸಿದ್ದಾನೆ.
2020 ಡಿಸೆಂಬರ್ 12 ರಿಂದ 2021 ಮಾರ್ಚ್ 12 ದಿನಾಂಕದ ವರೆಗೆ ಮಂಗಳೂರಿನ ವ್ಯಕ್ತಿಯಿಂದ ಬಹುಮಾನ ನೀಡುತ್ತೇವೆ ಎಂದು 7,85,800 ರೂ. ವರ್ಗಾಯಿಸಿಕೊಂಡಿದ್ದಾರೆ. ಆರೋಪಿಗಳು ಬಹುಮಾನ ನೀಡದೇ ವಂಚನೆ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದ ಬಳಿಕ ಈ ವ್ಯಕ್ತಿ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.