ಮಂಗಳೂರು: ವೈಚಾರಿಕ ವಿರೋಧಿಗಳು, ಅರಾಜಕ ಶಕ್ತಿಗಳ ಜೊತೆಗೆ ಕಾಂಗ್ರೆಸ್ ಪಕ್ಷ ಕೈಜೋಡಿಸಿ ಸಿಎಎ ನೆಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವಂತಹ ಪ್ರಯತ್ನ ಮಾಡುತ್ತಿರೋದು ಸ್ಪಷ್ಟವಾಗುತ್ತಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಕೊಡಿಯಾಲಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ವಿಚಾರದಲ್ಲಿ, 370ನೇ ವಿಧಿ ರದ್ದುಪಡಿಸಿದಾಗ, ಅಯೋಧ್ಯೆಯ ತೀರ್ಪು ಬಂದಾಗ ಗಲಭೆಗಳಾಗುತ್ತವೆ ಎಂದು ಕಾಂಗ್ರೆಸ್ಗೆ ನಿರೀಕ್ಷೆ ಇತ್ತು. ಆದ್ದರಿಂದ ದೇಶದಲ್ಲಿ ಅರಾಜಕತೆ ಹಾಗೂ ಗಲಭೆಗಳನ್ನು ಸೃಷ್ಟಿ ಮಾಡಲು ಪೂರ್ವನಿಯೋಜಿತ ಸಂಚು ಮಾಡಿ ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು ನೆಪವಾಗಿರಿಸಿ ಗಲಭೆ ಎಬ್ಬಿಸಿರೋದು ಸ್ಪಷ್ಟವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡುವುದು, ಹಿಂಸಾಚಾರ ನಡೆಸೋದು ಪ್ರಜಾಸತ್ತಾತ್ಮಕ ಚಳುವಳಿಯಲ್ಲ. ಆದ್ದರಿಂದ ಕಾಂಗ್ರೆಸ್ಗೆ ದೇಶದ ಹಿತಕ್ಕಿಂತ ಮತ ಬ್ಯಾಂಕ್ ಮುಖ್ಯನಾ? ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ನಿರಾಶ್ರಿತರಾಗಲು ಕಾರಣ ನಿಮಗೆ ತಿಳಿದಿಲ್ಲವೇ ಎಂದು ಸಿ.ಟಿ.ರವಿ ಕಾಂಗ್ರೆಸ್ಗೆ ಪ್ರಶ್ನಿಸಿದರು.
ಸಿಎಎಯಿಂದ ಯಾವ ಭಾರತೀಯನಿಗೆ ಅನ್ಯಾಯವಾಗಿದೆ? ಕರ್ನಾಟಕದಲ್ಲಿ ಸಿಎಎ ಜಾರಿಗೊಂಡರೆ ಕರ್ನಾಟಕಕ್ಕೆ ಬೆಂಕಿ ಬೀಳಲಿದೆ ಎಂದು ಯು.ಟಿ.ಖಾದರ್ ಹೇಳಿದರು. ಈ ಹೇಳಿಕೆ ಬಗ್ಗೆ ಜಾಣ ಕುರುಡು, ಜಾಣ ಕಿವುಡು, ಜಾಣ ಮೌನ ಯಾತಕ್ಕೆ? 144 ಸೆಕ್ಷನ್ ಜಾರಿಯಲ್ಲಿರುವಾಗ ಜನರನ್ನು ಬೀದಿಗಿಳಿಸಿದ್ದು ಯಾರು, ಬೀದಿಗಿಳಿದವರು ಯಾರು, ಯಾತಕ್ಕೆ? ಈಗ ಪೊಲೀಸರನ್ನು ಅವಮಾನಿಸಿ ಕಾಂಗ್ರೆಸ್ ರಾಜ್ಯಕ್ಕೆ ಏನು ಸಂದೇಶ ನೀಡುತ್ತಿದೆ? ಈಗ ತನಿಖೆ ಮಾಡದೆ ತೀರ್ಪು ನೀಡಲಾಗಿದೆ ಎಂದು ಹೇಳುವ ಕಾಂಗ್ರೆಸಿಗರು ದನಗಳ್ಳ ಕಬೀರ್ ಎಂಬಾತನ ಎನ್ಕೌಂಟರ್ ನಡೆದಾಗ ಆತನ ಕುಟುಂಬಸ್ಥರಿಗೆ ಪರಿಹಾರ ನೀಡಿ, ಎನ್ಕೌಂಟರ್ ನಡೆಸಿದ ಪೊಲೀಸನ್ನು ಯಾವುದೇ ತನಿಖೆ ನಡೆಸದೆ 302 ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರೋದು ಯಾತಕ್ಕೆ? ತನಿಖಾ ವರದಿ ಕೈ ಸೇರುವ ಮುಂಚೆ ಪೊಲೀಸನ್ನು ಜೈಲಿಗೆ ಕಳುಹಿಸಿರೋದು ನಿಮ್ಮದು ಕ್ರಿಮಿನಲ್ಗಳಿಗೆ ಬೆಂಬಲ ಕೊಡುವ ಮನಸ್ಥಿತಿಯಲ್ಲವೇ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಬಲಿಯಾದವರು ಗಲಭೆಯಲ್ಲಿ ಪಾಲ್ಗೊಂಡಿದ್ದರೆ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿರೋದು ಸರಿಯಾಗಿದೆ. ತನಿಖಾ ಕಾರ್ಯ ನಡೆಯುತ್ತಿದೆ. ಅದರಲ್ಲಿ ಅವರು ಅಮಾಯಕರು ಎಂದು ಸಾಬೀತಾಗಲಿ. ಖಂಡಿತಾ ಆ ಬಳಿಕ ಅವರಿಗೆ ಪರಿಹಾರ ಕೊಡಲಾಗುವುದು ಎಂದು ಸಿ.ಟಿ.ರವಿ ಹೇಳಿದರು.