ಮಂಗಳೂರು: ಬೆಳೆ ಸಮೀಕ್ಷೆ ಆ್ಯಪ್ ಮೂಲಕ ರೈತರು ತಮ್ಮ ಬೆಳೆಗಳ ವಿವರಗಳನ್ನು ಮೊಬೈಲ್ ಮುಖೇನ ತಾವೇ ದಾಖಲಿಸುವ ಯೋಜನೆಗೆ, ಪುತ್ತೂರು ಶಾಸಕ ಸಂಜೀವ ಮಠಂದೂರು ತೋಟದಲ್ಲಿ ಚಾಲನೆ ನೀಡಲಾಯಿತು ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ತಾಲೂಕಿನ 33 ಗ್ರಾಮಗಳಲ್ಲಿ ಒಟ್ಟು 96,326 ಹೆಕ್ಟೇರ್ ಕೃಷಿ ಭೂಮಿ ಇದೆ. ಆ್ಯಪ್ ವಿಧಾನದ ಮೂಲಕ ರೈತರೇ ಬೆಳೆ ಸಮೀಕ್ಷೆ ನಡೆಸಿದ್ದಲ್ಲಿ ಬೆಳೆಯ ಕುರಿತು ಸ್ಪಷ್ಟ ವಿವರ, ಯಾವ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬಹುದು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ, ಬೆಳೆ ನಷ್ಟ ಪರಿಹಾರ ನೀಡಲು ಅನುಕೂಲವಾಗಲಿದೆ. ಅ.24ರವರೆಗೆ ಈ ಸಮೀಕ್ಷೆ ನಡೆಯುತ್ತದೆ.
ಒಂದು ವೇಳೆ ರೈತರ ಬಳಿ ಆ್ಯಂಡ್ರಾಯ್ಡ್ ಮೊಬೈಲ್ ಇಲ್ಲದಿದ್ದರೇ, ಬೇರೆಯವರ ಮೊಬೈಲ್ನಿಂದ ಈ ಸಮೀಕ್ಷೆಯನ್ನು ಮಾಡಲು ಅವಕಾಶವಿದೆ. ಕೃಷಿ ಭೂಮಿಯ 30ಮೀ. ವ್ಯಾಪ್ತಿಯೊಳಗೆ ನಿಂತು ಬೆಳೆ ಮತ್ತು ಫೋಟೋಗಳ ದಾಖಲೀಕರಣ ನಡೆಸಲು ಸಾಧ್ಯವಿದೆ. ಕೃಷಿ ಭೂಮಿಯಿಂದ 30ಮೀ. ಹೊರಗಡೆ ಸಮೀಕ್ಷಾ ಕಾರ್ಯ ನಡೆಸಲು ಸಾಧ್ಯವಿಲ್ಲ. ಎಲ್ಲಾ ರೈತರು ಬೆಳೆ ಸಮೀಕ್ಷೆ ಆ್ಯಪ್ನನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ತಮ್ಮ ಜಮೀನಿನ ಸರ್ವೆ ನಂಬರ್ ದಾಖಲಿಸಿ ಬೆಳೆಗಳ ಮಾಹಿತಿಗಳನ್ನು ನಮೂದಿಸಬೇಕಾಗಿದೆ ಎಂದು ಡಾ. ಉಳ್ಳಾಲ್ ಹೇಳಿದರು.