ಮಂಗಳೂರು : ಯುವಕನ ಮೇಲೆ ತಲ್ವಾರ್ ದಾಳಿ ನಡೆಸಿದ ಮೂವರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಕಾವೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಪಂಜಿಮೊಗರುವಿನ ಉರುಂದಾಡಿಗುಡ್ಡೆ ನಿವಾಸಿ ಚರಣ್ ರಾಜ್ ಯಾನೆ ಚರಣ್ ಯಾನೆ ಚರಣ್ ಉರುಂದಾಡಿಗುಡ್ಡ (24), ಸುರತ್ಕಲ್ನ ಕುಳಾಯಿಯ ಹೊಸಬೆಟ್ಟು ನಿವಾಸಿ ಸುಮಂತ್ ಬರ್ಮನ್ (24), ನಗರದ ಕೋಡಿಕಲ್ನ ಸುಂಕದಕಟ್ಟೆ ಕಲ್ಲಬಾವಿ ನಿವಾಸಿ ಅವಿನಾಶ್ (24) ಬಂಧಿತ ಆರೋಪಿಗಳು.
ಕಳೆದ ಆಗಸ್ಟ್ 20ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಮ್ವಿ ಶೆಟ್ಟಿ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಈ ಮೂವರು ಆರೋಪಿಗಳು ತಲ್ವಾರ್ ದಾಳಿ ನಡೆಸಿದ್ದರು. ಸ್ಕೂಟಿಯಲ್ಲಿ ಬಂದ ಮೂವರು ಆರೋಪಿಗಳು ಯುವಕನನ್ನು ಅಡ್ಡಗಟ್ಟಿ ತಲ್ವಾರ್ ಬೀಸಿದ್ದರು. ಈ ವೇಳೆ ಯುವಕ ತಪ್ಪಿಸಿಕೊಂಡಿದ್ದು, ಆತನ ಮುಖಕ್ಕೆ ಗಾಯವಾಗಿತ್ತು. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಕಾವೂರು ಠಾಣಾ ಪೊಲೀಸರು ಕೇವಲ 24 ಗಂಟೆಗಳ ಒಳಗಾಗಿ ಮೂವರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ಅವರ ಸಲಹೆಯಂತೆ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ತಲ್ವಾರ್ ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಚರಣ್ ಉರುಂದಾಡಿಗುಡ್ಡ ವಿರುದ್ಧ ಈ ಮೊದಲು ಉರ್ವಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪಣಂಬೂರು ಪೊಲೀಸ್ ಠಾಣೆಯಲ್ಲಿ- 1 ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ- 3 ಪ್ರಕರಣಗಳು ದಾಖಲಾಗಿದ್ದು ಒಟ್ಟು 5 ಪ್ರಕರಣಗಳು ದಾಖಲಾಗಿದೆ. ಆರೋಪಿ ಸುಮಂತ್ ಬರ್ಮನ್ ವಿರುದ್ದ ಈ ಮೊದಲು ಪಣಂಬೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ-1 ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ-2 ಪ್ರಕರಣಗಳು ದಾಖಲಾಗಿದ್ದು, ಒಟ್ಟು 4 ಪ್ರಕರಣಗಳು ದಾಖಲಾಗಿದೆ.
ಆರೋಪಿ ಅವಿನಾಶ್ ವಿರುದ್ಧ ಈ ಮೊದಲು ಉರ್ವಾ ಪೊಲೀಸ್ ಠಾಣೆಯಲ್ಲಿ-4 ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ 1 ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತವೆ. ಪ್ರಸ್ತುತ ಈತ ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಗಡಿಪಾರು ಆದೇಶದಲ್ಲಿರುತ್ತಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮಂಗಳೂರು: ಜೆಸಿಬಿ ಬಳಸಿ ATM ಕಳವು ಯತ್ನ; ನಾಲ್ವರ ಬಂಧನ, ₹15.50 ಮೌಲ್ಯದ ಸೊತ್ತು ವಶಕ್ಕೆ