ಮಂಗಳೂರು (ದಕ್ಷಿಣ ಕನ್ನಡ): ಸರಗಳ್ಳತನ ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು, ಸುರತ್ಕಲ್ ಮತ್ತು ಮೂಡಬಿದಿರೆಯಲ್ಲಿ ನಡೆದ ಸರಗಳ್ಳತನ ಪ್ರಕರಣ ಭೇದಿಸಿದಾಗ 8 ಸರಗಳ್ಳತನ ಪ್ರಕರಣ ಮತ್ತು 4 ಬೈಕ್ ಕಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ತಿಳಿಸಿದರು.
ಮಂಗಳೂರಿನ ಸುರತ್ಕಲ್ ಕೃಷ್ಣಾಪುರದ ಹಬೀಬ್ ಹಸನ್ ಯಾನೆ ಚೊಂಬುಗುಡ್ಡ ಹಬೀಬ್ ಯಾನೆ ಅಬ್ಬಿ ಮತ್ತು ಮಂಗಳೂರಿನ ಉಳ್ಳಾಲದ ಕೋಡಿ ನ್ಯೂ ತೋಟ ಹೌಸ್ ಮೊಹಮ್ಮದ್ ಫೈಜಲ್ ಯಾನೆ ಕೋಡಿ ಫೈಜಲ್ ಯಾನೆ ಶಾಕೀರ್ ಯಾನೆ ಫೈಜ್ ಬಂಧಿತರು ಎಂದು ತಿಳಿಸಿದರು.
ಜೂನ್ 2 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. 75 ವರ್ಷದ ಮಹಿಳೆಯೊಬ್ಬರು ಜೂನ್ 2ರಂದು ಮುಂಜಾನೆ ಮನೆಯ ಕಂಪೌಂಡಿನ ಒಳಗಿರುವ ಬಾವಿಯಿಂದ ನೀರು ಸೇದುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ 28 ಗ್ರಾಂನ ಕೊತ್ತಂಬರಿ ಸರ ಎಳೆದೊಯ್ದಿದ್ದರು. ಈ ಚಿನ್ನದ ಸರ ಅಂದಾಜು ಮೌಲ್ಯ 1,25,000 ರೂ. ಎಂದು ಅಂದಾಜಿಸಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪತ್ತೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸುರತ್ಕಲ್ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಉಪ ನಿರೀಕ್ಷಕ ಅರುಣ್ ಕುಮಾರ್ ಡಿ. ಮತ್ತು ಎ.ಎಸ್.ಐ ರಾಧಾಕೃಷ್ಣ, ಹೆಚ್.ಸಿ ಅಣ್ಣಪ್ಪ ವಂಡ್ರೆ, ಪಿ.ಸಿ ಕಾರ್ತಿಕ್ ಕುಲಾಲ್, ಪಿ.ಸಿ ಮಣಿಕಂಠ ಹೆಚ್.ಎ. ಪಿ.ಸಿ ನಾಗಾರಾಜ, ಪಿ.ಸಿ ಶಿವರಾಮ್ ಪಣಂಬೂರು ಪೊಲೀಸ್ ಠಾಣೆಯ ಪಿ.ಎಸ್.ಐ ಜ್ಞಾನಶೇಖರ ಮತ್ತು ಪಿ.ಸಿ ನಿಂಗಪ್ಪ ಹಾಗೂ ಬಚ್ಚೆ ಪೊಲೀಸ್ ಠಾಣಾ ಎ.ಎಸ್.ಐ ಕುಶಾಲ್ ಮಣಿಯಾಣಿ, ಕಾವೂರು ಪೊಲೀಸ್ ಠಾಣಾ ಹೆಚ್.ಸಿ ಇಸಾಕ್, ಮೂಡಬಿದ್ರೆ ಪೊಲೀಸ್ ಠಾಣಾ ಹೆಚ್.ಸಿ ಅಕೀಲ್ ಅಹ್ಮದ್ ಮತ್ತು ಹುಸೇನ್ ತನಿಖೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆ ಕಾರ್ಯ ಮಾಡಿದ್ದಾರೆ.
ಜೂನ್ 23 ರಂದು ಹಬೀಬ್ ಹಸನ್ ಎಂಬಾತನು ಬಂಟ್ವಾಳದ ಬಾಡಿಗೆ ಮನೆಯಲ್ಲಿ ಇದ್ದವನು ಉಳ್ಳಾಲದ ಮಹಮ್ಮದ್ ಫೈಜಲ್ ಎಂಬಾತನೊಂದಿಗೆ ಸೇರಿಕೊಂಡು ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳನ್ನು ಕಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಇಬ್ಬರು ಬಂಟ್ವಾಳದಲ್ಲಿ ವೃದ್ಧ ಮಹಿಳೆಯಿಂದ ಕದ್ದ ಚಿನ್ನಾಭರಣ ಹಾಗೂ ಸುರತ್ಕಲ್ ಬಳಿಯ ತಡಂಬೈಲು ಎಂಬಲ್ಲಿನ ವೃದ್ಧ ಮಹಿಳೆಯಿಂದ ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಪ್ರಯತ್ನಿಸಿ ಸಾಧ್ಯವಾಗದ ಕಾರಣ ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಕಡೆಯಿಂದ ಮಧ್ಯ-ಚೇಳ್ಯಾರು ಮಾರ್ಗವಾಗಿ ಬಂದು ಸುರತ್ಕಲ್‌ನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಕಾರ್ಕಳದ ನಗರ ಪೊಲೀಸ್ ಠಾಣೆಯ ಕುಕ್ಕುಂದೂರು ಎಂಬಲ್ಲಿ ವೃದ್ಧ ಮಹಿಳೆಯಿಂದ 36 ಗ್ರಾಂ ತೂಕದ ಗುಂಡು, ಹವಳ, ಇರುವ 1 ಲಕ್ಷ ರೂಪಾಯಿ ಮೌಲ್ಯದ ಲಕ್ಷ್ಮೀತಾಳೆ, ಕಾರ್ಕಳ ನಗರ ಪೊಲೀಸ್ ಠಾಣೆಯ ಕುಕ್ಕುಂದೂರು ಎಂಬಲ್ಲಿ ವೃದ್ಧ ಮಹಿಳೆಯಿಂದ 34 ಗ್ರಾಂ ತೂಕದ ಚಿನ್ನದ ತಾಳಿ ಇರುವ ಹವಳದ 1 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯಸರ, ಶಿರ್ವಾ ಪೊಲೀಸ್ ಠಾಣೆಯ ತುಂಡುಬಲ್ಲೆ ಎಂಬಲ್ಲಿ 11.920 ಗ್ರಾಂ ತೂಕದ 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಚೈನ್, ಮಣಿಪಾಲ ಪೊಲೀಸ್ ಠಾಣೆಯ ಪರ್ಕಳ ಬಬ್ಬರ್ಯ ದೈವಸ್ಥಾನದ ಬಳಿ 48 ಗ್ರಾಂ ತೂಕದ 3 ಲಕ್ಷ ರೂಪಾಯಿ ಮೌಲ್ಯದ ಚೈನ್, ಮೂಡಬಿದಿರೆ ಪೊಲೀಸ್ ಠಾಣೆಯ ಪಡುಮಾರ್ನಾಡು ಎಂಬಲ್ಲಿ 16 ಗ್ರಾಂ ತೂಕದ 80 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಕರಿಮಣಿಸರ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಜಂಬೆಟ್ಟು ಎಂಬಲ್ಲಿ 28.140 ಗ್ರಾಂ ತೂಕದ 1 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಕರಿಮಣಿಸರ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಪಚ್ಚಿನಡ್ಕ ಎಂಬಲ್ಲಿ 19 ಗ್ರಾಂ ತೂಕದ 75 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಕರಿಮಣಿಸರ, ಸುರತ್ಕಲ್ ಪೊಲೀಸ್ ಠಾಣೆಯ ತಡಂಬೈಲು ಎಂಬಲ್ಲಿ ವೃದ್ಧ ಮಹಿಳೆಯಿಂದ 28 ಗ್ರಾಂ ತೂಕದ 1 ಲಕ್ಷ 25 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಕೊತ್ತಂಬರಿ ಡಿಸೈನ್ ಚೈನ್, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಡೂರು ಎಂಬಲ್ಲಿ 7.030 ಗ್ರಾಂ ತೂಕದ 40 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಚೈನ್, ಮೂಡಬಿದಿರೆ ಪೊಲೀಸ್ ಠಾಣೆಯ ಸರಹದ್ದಿನ ಕೀರ್ತಿನಗರ ಎಂಬಲ್ಲಿ ಕಪ್ಪು ಬಣ್ಣದ ಹೊಂಡಾ ಶೈನ್ ಬೈಕ್, ಕಾವೂರು ಪೊಲೀಸ್ ಠಾಣೆಯ ಮಾಲೆಮಾರ್ ಎಂಬಲ್ಲಿ ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಲ್ಲಿಕಟ್ಟೆ ಎಂಬಲ್ಲಿ ಬೈಕ್, ಮಣಿಪಾಲ ಪೊಲೀಸ್ ಠಾಣೆಯ ಶಿವಳ್ಳಿ ಗ್ರಾಮದ ಓಶಿಯನ್ ವ್ಯೂ ಅಪಾರ್ಟ್‌ಮೆಂಟ್ ನಿಂದ ಸ್ಕೂಟರ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಒಟ್ಟು 12,48,550 ರೂ ಮೌಲ್ಯದ 240 ಗ್ರಾಂ ಚಿನಾಭರಣಗಳನ್ನು ಮತ್ತು 1,34,000/- ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಾಹನವನ್ನು ಕಳವು ಮಾಡಿ ಕಳವು ಮಾಡಿದ ವಾಹನದಲ್ಲಿ ಸರಗಳ್ಳತನ ಮಾಡುವ ಚಾಳಿಯನ್ನು ಹೊಂದಿದ್ದರು ಎಂದು ಮಾಹಿತಿ ನೀಡಿದರು.
ಮಂಗಳೂರು ನಗರ ಡ್ರಗ್ಸ್ ಫ್ರೀ ಮಾಡಲು ಪ್ರಯತ್ನ: ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತ ಮಾಡಲು ಪ್ರಯತ್ನಿಸಲಾಗುತ್ತಿದೆ. ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಕ್ರಮ ಮತ್ತು ಅರಿವು ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು. ಈಗಾಗಲೇ 288 ಶಾಲಾ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿರುವವರ ಮೇಲೆ ನಿಗಾ ವಹಿಸುವುದನ್ನು ಮಾಡಲಾಗುತ್ತಿದೆ. ಬಕ್ರೀದ್ ವೇಳೆ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಪ್ರೈಸ್ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗುವುದು ಎಂದರು.