ಮಂಗಳೂರು: ನಗರದ ಅತ್ತಾವರ ಬ್ರಿಜೇಶ್ ಅಪಾರ್ಟ್ಮೆಂಟ್ನ ಮನೆಯಲ್ಲಿ ಕಳ್ಳತನ ಮಾಡಿ ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದ ದೆಹಲಿ ಮತ್ತು ಪಶ್ಚಿಮ ಬಂಗಾಳ ಮೂಲದ ಆರೋಪಿಗಳನ್ನು ಪ್ರಕರಣ ದಾಖಲಾದ ಮೂರು ಗಂಟೆಯೊಳಗೆ ಬಂಧಿಸಲಾಗಿದೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ದೆಹಲಿಯ ಜಹಂಗೀರ ಪುರಿ ಉತ್ತರದ ಕುಶಲ್ ಸಿನಿಮಾ ಹಾಲ್ ಹತ್ತಿರದ ನಿವಾಸಿ ಮೊಹಮ್ಮದ್ ಅಶೀಪ್ ಯಾನೆ ಆಶೀಷ್ (23) ಪಶ್ಚಿಮ ದೆಹಲಿಯ ಜಹಂಗೀರ ಪುರಿ ಉತ್ತರದ ನಗ ನಿಗಮ್ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರದ ನಿವಾಸಿ ಶೇಕ್ ಮೈದುಲ್ (25) ಪಶ್ಚಿಮ ದೆಹಲಿಯ ಜಹಾಂಗೀರ ಪುರಿಯ ಕುಶಾಲ್ ಚೌಕ್ ಹತ್ತಿರದ ನಿವಾಸಿ ವಕೀಲ್ ಅಹಮ್ಮದ್ (34) ಪಶ್ಚಿಮ ಬಂಗಾಲದ ಮೈದನಾಪುರ ಜಿಲ್ಲೆಯ ನಂದಿಗ್ರಾಮ ಪೂರ್ವದ ಜಲಪಾಯಿ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರದ ನಿವಾಸಿ ರಫೀಕ್ ಖಾನ್ (24) ಬಂಧಿತರು.
ಆರೋಪಿಗಳು ಜೂನ್ 15 ರಂದು ಮಧ್ಯಾಹ್ನ 1ಗಂಟೆಯಿಂದ 3ಗಂಟೆಯ ಮಧ್ಯದ ಅವಧಿಯಲ್ಲಿ ಮಂಗಳೂರು ನಗರದ ಅತ್ತಾವರ ಕೆ.ಎಂ.ಸಿ, ಆಸ್ಪತ್ರೆಯ ಸಮೀಪದಲ್ಲಿರುವ ಬ್ರಿಜೇಶ್ ಅಪಾರ್ಟ್ಮೆಂಟ್ನ ಮನೆಯ ಎದುರು ಬಾಗಿಲುಗಳನ್ನು ಮುರಿದು ಗೊದ್ರೇಜ್ ಕಪಾಟಿನಲ್ಲಿದ್ದ ವಿವಿಧ ನಮೂನೆಯ ಚಿನ್ನಾಭರಣ ನಗದು ಹಣ ಸೇರಿ 4,45,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವಿಜಯಪುರ ಜಿಲ್ಲೆಯ ಪೂಜಾ ಎಂಬವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಹೇಳಿದ್ದೇನು?: ಜೂನ್ 15ರಂದು ಸಂಜೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮನೋಹರ್ ಪ್ರಸಾದ್ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರ ಹಾಗೂ ಅಪರಾಧ ಪತ್ತೆ ಸಿಬ್ಬಂದಿ ಮಂಗಳೂರು ನಗರದ ಪಣಂಬೂರು ಬೀಚ್ ಬಳಿ ಸಂಶಯಾಸ್ಪದ ರೀತಿಯಲ್ಲಿ ಇದ್ದ ನಾಲ್ಕು ಜನ ಯುವಕರನ್ನು ರಾತ್ರಿ 8ಗಂಟೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದು ಪೊಲೀಸ್ ನಿರೀಕ್ಷಕರಾದ ಮಂಜುನಾಥ ಎಂ ಅವರ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳನ್ನು ಕೂಲಂಕಷವಾಗಿ ವಿಚಾರಿಸಿದಾಗ ಅವರು ನಗರದ ಅತ್ತಾವರದಲ್ಲಿರುವ ಬ್ರಿಜೇಶ್ ಅಪಾರ್ಟ್ಮೆಂಟ್ನ ಎರಡು ಮನೆಗಳ ಬೀಗ ಮುರಿದು ಕಳವು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಅವರನ್ನು ಬಂಧಿತರಿಂದ ಚಿನ್ನಾಭರಣ, ನಗದು ಹಣ ಹಾಗೂ ಕೃತ್ಯ ನಡೆಸಲು ಉಪಯೋಗಿಸಿದ ಆಯುಧಗಳಾದ 2 ಕಟ್ಟರ್ ಹಾಗೂ 2 ಸ್ಕ್ರೂ ಡ್ರೈವರ್ ಮತ್ತು 1 ಚೂಪಾದ ಕಬ್ಬಿಣದ ರಾಡ್ ಹಾಗೂ 7 ಮೊಬೈಲ್ಗಳನ್ನು ವಶಪಡಿಸಲಾಗಿದೆ.
ಆರೋಪಿಗಳು ದೆಹಲಿ ಹಾಗೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು ತನಿಖೆಯ ವೇಳೆ ಮಧ್ಯಾಹ್ನ 1ರಿಂದ 3 ಗಂಟೆಯ ಮಧ್ಯಾವಧಿಯಲ್ಲಿ ಸಿ.ಸಿ.ಕ್ಯಾಮರಾ ಇಲ್ಲದೇ ಇರುವ ಬೀಗ ಹಾಕಿರುವ ಮನೆ ಹಾಗೂ ಅಪಾರ್ಟಮೆಂಟ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿರುವುದು ತನಿಖೆಯಿಂದ ತಿಳಿದಿದೆ. ಮಂಗಳೂರು ನಗರದ ಇತರ ಕಡೆಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಮಾಡಿದ ಕಾರ್ಯದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ. ಪೊಲೀಸ್ ಉಪನೀಕ್ಷಕರಾದ ಮನೋಹರ್ ಪ್ರಸಾದ್ ಪಿ, ಅನಂತ ಮುರ್ಡೇಶ್ವರ್, ಶೀತಲ್ ಅಲಗೂರು ಜ್ಯೋತಿ ಜಿ. ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಪ್ರಕಾಶ್ ನಾಯ್ಕ ವಿ, ಲಕ್ಷ್ಮಣ ಸಾಲೋಟಗಿ, ಭಾಸ್ಕರ್ ಹಾಲಾಡಿ ಸ್ವಾಮಿ ಎಸ್. ಭಾಗವಹಿಸಿದ್ದರು.
ಇದನ್ನೂ ಓದಿ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್ಟೇಬಲ್ ಸಾವು - ಕೊಲೆ ಶಂಕೆ