ಮಂಗಳೂರು : ಐಪಿಎಲ್ ಹವಾ ಶುರುವಾದ ಬೆನ್ನಲ್ಲೇ ಕ್ರಿಕೆಟ್ ಬೆಟ್ಟಿಂಗ್ ಜಾಲ ಸಕ್ರಿಯವಾಗಿದೆ. ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಕಾತುರದಿಂದ ಕಾಯುವವರು ಒಂದೆಡೆಯಾದರೆ, ಬೆಟ್ಟಿಂಗ್ ದಂಧೆ ನಡೆಸುವವರು ಮತ್ತೊಂದೆಡೆ. ಇದಕ್ಕೆ ಯುವ ಸಮುದಾಯದವರೇ ಟಾರ್ಗೆಟ್. ಮಂಗಳೂರಿನಲ್ಲಿಯೂ ಬೆಟ್ಟಿಂಗ್ ನಡೆಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಐಪಿಎಲ್ ಕ್ರಿಕೆಟ್ ಪರಿಚಯದ ಬಳಿಕ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಲಗೊಂಡಿದೆ. ಹಿಂದೆ ಮೊಬೈಲ್ ಸಂಭಾಷಣೆಯಲ್ಲಿ ನಡೆಯುತ್ತಿದ್ದ ಜಾಲ ಇದೀಗ ಆ್ಯಪ್ಗೆ ಅಪ್ಗ್ರೇಡ್ ಆಗಿದೆ. ಸೀಮಿತ ಅವಧಿಯಲ್ಲಿ ನಡೆಯುವ ಈ ಬೆಟ್ಟಿಂಗ್ ಜಾಲ ಬೇಧಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಇದೀಗ ಕ್ರಿಕೆಟ್ ಬೆಟ್ಟಿಂಗ್ ದಂಧೆಯು ಆ್ಯಪ್ ಮೂಲಕ ಕಾರ್ಯಾಚರಿಸುತ್ತಿದೆ. ಕಾನೂನಿನ ಕಣ್ಣು ತಪ್ಪಿಸಿ ನಡೆಯುವ ಈ ದಂಧೆಯಲ್ಲಿ ಕೋಟ್ಯಂತರ ರೂಪಾಯಿಯ ಅನಧಿಕೃತ ವ್ಯವಹಾರವಾಗುತ್ತದೆ ಎಂದು ಹೇಳಲಾಗುತ್ತಿದೆ. ಹಲವು ಕೋಟಿಗಳ ವ್ಯವಹಾರ ನಡೆಯುವ ಈ ದಂಧೆ ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವ ಸೂತ್ರಧಾರ ವಿದೇಶದಲ್ಲಿರುವುದು.
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಾಕಿದ ಹಣ ಸಿಗುತ್ತದೆ ಎಂಬ ವಿಶ್ವಾಸ ಇಲ್ಲವಾದರೂ ಗೆದ್ದ ಹಣ ಕೈ ಸೇರುತ್ತದೆ ಎಂಬ ನಂಬಿಕೆ ಇದೆ. ಈ ಕ್ರಿಕೆಟ್ ಬೆಟ್ಟಿಂಗ್ ಮಟ್ಕಾ ದಂಧೆಯ ಮುಂದುವರಿದ ಭಾಗವಾಗಿದೆ. ಹವಾಲಾ ದಂಧೆಯ ಮತ್ತೊಂದು ಮುಖವಾಗಿರುವ ಈ ಜಾಲದಲ್ಲಿ ದೊಡ್ಡ ದೊಡ್ಡ ಕುಳಗಳೇ ಭಾಗಿಯಾಗಿದ್ದಾರೆ.
ಮಂಗಳೂರಿನಲ್ಲಿ ಬೆಟ್ಟಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಹಲವು ಮಂದಿಯನ್ನು ಸಂದೀಪ್ ಪಾಟೀಲ್ ಕಮಿಷನರ್ ಆಗಿದ್ದ ವೇಳೆ ಬಂಧಿಸಿದ್ದರು. ಆದರೆ, ಪೊಲೀಸರು ವಶಪಡಿಸಿಕೊಂಡ ಬೆಟ್ಟಿಂಗ್ ಹಣ ಜೂಜಿಗೆ ಹಾಕಲಾಗಿತ್ತು ಎಂದು ನಿರೂಪಿಸಲು ಪೊಲೀಸರು ಪ್ರಯಾಸ ಪಡಬೇಕಾಗಿದೆ. ಬೆಟ್ಟಿಂಗ್ನಲ್ಲಿ ವಶಪಡಿಸಿಕೊಳ್ಳಲಾಗುವ ಹಣವನ್ನು ತಮ್ಮ ಕಾನೂನು ಬದ್ಧ ವ್ಯವಹಾರಗಳಿಗೆ ತೋರಿಸಿ ಪಾರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅವಳಿನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಜ್ಜು
ಮೊದಲೆಲ್ಲಾ ಮೊಬೈಲ್ನಲ್ಲಿ ಮಾತನಾಡಿ ಬೆಟ್ಟಿಂಗ್ ನಡೆಸುತ್ತಿದ್ದರು. ಇದೀಗ ಬೆಟ್ಟಿಂಗ್ ಆ್ಯಪ್ ಮೂಲಕ ಈ ಕಾನೂನು ಬಾಹಿರ ವಹಿವಾಟು ನಡೆಯುತ್ತಿದೆ. ಆ್ಯಪ್ನಲ್ಲಿ ಹಣ ಹಾಕಿ ಕೊನೆಯ ಬಾಲ್ವರೆಗೂ ಬೆಟ್ಟಿಂಗ್ ನಡೆಸುವ ಅವಕಾಶವಿದೆ. ಇದರಲ್ಲಿ ಹೆಚ್ಚು ಬೆಟ್ಟಿಂಗ್ ಪ್ರಿಯರು ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಮುತುವರ್ಜಿಯೂ ಅಗತ್ಯವಾಗಿದೆ.