ಮಂಗಳೂರು: ಆ್ಯಪ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಐವರು ಆರೋಪಿಗಳನ್ನು ನಗರದ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ವಶಪಡಿಸಿಕೊಂಡಿದ್ದಾರೆ.
ಅಡ್ಯಾರ್ ನಿವಾಸಿ ಅಶೋಕ್ (40), ಕುಲಶೇಖರ ನಿವಾಸಿ ಉದಯ್ (40), ಪಾಂಡೇಶ್ವರ ನಿವಾಸಿ ರವಿ (35), ವಾಮಂಜೂರು ನಿವಾಸಿಗಳಾದ ರಾಧಾಕೃಷ್ಣ(35), ದಿತ್ತು (30) ಬಂಧಿತ ಆರೋಪಿಗಳು. ಕರುಣಾಕರ್ ಭಂಡಾರಿ ಎಂಬಾತ ದುಬೈನಲ್ಲಿದ್ದು, ‘ಆರೆಂಜ್ 333’ ಆ್ಯಪ್ ಮೂಲಕ ಐಪಿಎಲ್, ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ವಾರಕ್ಕೆ ಎರಡರಿಂದ ಮೂರು ಬಾರಿ ನಗರಕ್ಕೆ ಬಂದು ಬೆಟ್ಟಿಂಗ್ ವ್ಯವಹಾರದ ಹಣ ಪಡೆದು ಲೆಕ್ಕಪತ್ರ ಚುಕ್ತಾ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಟ್ಟಿಂಗ್ ದಂಧೆಯ ರೂವಾರಿ ಕರುಣಾಕರ್ ಭಂಡಾರಿಗೆ ಅಡ್ಯಾರ್ ಅಶೋಕ್ ಎಂಬಾತ ನಗರದಲ್ಲಿ ಪ್ರಮುಖ ಏಜೆಂಟ್ ಆಗಿದ್ದು, ಆತನನ್ನು ಆ್ಯಪ್‌ನ ಎಡ್ಮಿನ್ ಮಾಡಿದ್ದ. ಈತನ ಮೂಲಕ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು. ಇದೇ ಮಾದರಿಯಲ್ಲಿ ಹಲವರು ಎಡ್ಮಿನ್‌ಗಳನ್ನು ಮಾಡಿರುವ ಸಾಧ್ಯತೆಯಿದೆ. ಆರೋಪಿಗಳಾದ ಕರುಣಾಕರನ್ ಸಂಬಂಧಿ ರವಿ ಮತ್ತು ಉದಯ್ ಎಂಬವರು ಏಜೆಂಟ್‌ಗಳಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ಅಶೋಕ್, ರಾಧಾಕೃಷ್ಣ, ದಿತ್ತು ಎಂಬವರನ್ನು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ ಎರಡು ಲಕ್ಷ ರೂ. ವಶಪಡಿಸಿಕೊಂಡರೆ, ಉದಯ್ ಮತ್ತು ರವಿಯನ್ನು ಬಂದರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ 52 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ, ಪಿಎಸ್ಐ ಕಬ್ಬಾಳ್‌ರಾಜ್, ಎಎಸ್ಐ ಮೋಹನ್, ಆಶಿತ್, ರಾಜಾ, ಮಣಿ, ವಿಶ್ವನಾಥ್ ಭಾಗವಹಿಸಿದ್ದರು.