ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸರ್ಕಾರದ ವೆನ್ಲಾಕ್ ಕೋವಿಡ್ ಆಸ್ಪತ್ರೆ ಇದ್ದರೂ ಜನಪ್ರತಿನಿಧಿಗಳಿಗೆ, ಕಾಂಗ್ರೆಸ್, ಬಿಜೆಪಿಯ ಮುಖಂಡರಿಗೆ ಕೊರೊನಾ ಬಂದರೆ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಹಾಗಾದರೆ, ಬಡಪಾಯಿಗಳಿಗೆ ಸಾಯಲೆಂದೇ ಸರ್ಕಾರದ ಆಸ್ಪತ್ರೆ ಇರುವುದೇ ಎಂದು ಸಿಪಿಐಎಂ ದ.ಕ.ಜಿಲ್ಲಾ ಮುಖಂಡ ಸುನಿಲ್‌ಕುಮಾರ್ ಬಜಾಲ್ ಪ್ರಶ್ನಿಸಿದರು.
ನಗರದ ಪುರಭವನ ಗೇಟ್ ಬಳಿ ನಡೆದ ವಾರಾಚರಣೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ತಾವು ವೆನ್ಲಾಕ್ ಆಸ್ಪತ್ರೆಯಲ್ಲಿ ಮಲಗಿದರೆ ಸಾಯುತ್ತೇವೆಂದು ತಿಳಿದೇ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಅಸೌಖ್ಯವಾದಲ್ಲಿ ನಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕೇ ಹೊರತು ನೆರೆಮನೆಯಲ್ಲಿ ವಿಶ್ರಾಂತಿ ಪಡೆದಲ್ಲಿ ಅದಕ್ಕೆ ಅರ್ಥವಿಲ್ಲ. ಆದ್ದರಿಂದ ಜನಪ್ರತಿನಿಧಿಗಳಿಗೇ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಇಲ್ಲದಿದ್ದಲ್ಲಿ ಅದಕ್ಕೆ ಅರ್ಥವಿಲ್ಲ ಎಂದು ಕಿಡಿಕಾರಿದರು.
ಜಾಗತಿಕ ಮಟ್ಟದಲ್ಲಿ, ದೇಶದಲ್ಲಿ, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮರಣ ಪ್ರಮಾಣ ಕಡಿಮೆ ಇದೆ. ಆದರೆ, ದ.ಕ.ಜಿಲ್ಲೆಯಲ್ಲಿ ಮಾತ್ರ ಸೋಂಕಿತರ ಮರಣ ಪ್ರಮಾಣ ಅಧಿಕವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳು, ವೈದ್ಯರು ಇದ್ದರೂ ಸಾವಿನಲ್ಲೂ ಹಣ ಮಾಡುವ ದಂಧೆ ಮಾಡಲಾಗುತ್ತಿದೆ. ಈ ಮೂಲಕ ಬಡಪಾಯಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದರು.
ಕೊರೊನಾದ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು, ಸರ್ಕಾರ ಬಡ ಜನರನ್ನು ಲೂಟಿ ಮಾಡುತ್ತಿವೆ. ಖಾಸಗಿ ಆಸ್ಪತ್ರೆಗಳು ತಮ್ಮದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸ್ಪೆಷಲಿಸ್ಟ್ ವೈದ್ಯರು ಇದ್ದಾರೆ ಎಂದು ಹೇಳುತ್ತವೆ. ಆದರೆ, ಜನರನ್ನು ಉಳಿಸಲು ಮಾತ್ರ ಅವರಿಂದ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.