ಕಾರವಾರ: ಮಹಾಮಾರಿ ಕೊರೊನಾ ವೈರಸ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕಾರವಾರ ತಾಲೂಕಿನ ಹೊಟೆಗಾಳಿ ನಿವಾಸಿ 71 ವರ್ಷದ ವೃದ್ಧೆ ಸೋಂಕಿನ ಲಕ್ಷಣ ಮುಚ್ಚಿಟ್ಟು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ನಲ್ಲಿ ಸಾಮಾನ್ಯ ರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಅಸುನಿಗಿದ್ದಾಳೆ.
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಈಕೆ ಮಂಗಳೂರಿಗೆ ಹೋಗಿ ಬಂದು ಬಳಿಕ ಜಿಲ್ಲಾ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಾಗಿದ್ದಳು. ಆದರೆ ಈಕೆಗೆ ಜ್ವರ ಇರುವ ಮಾಹಿತಿ ಕುಟುಂಬಸ್ಥರು ಕೂಡ ಮುಚ್ಚಿಟ್ಟಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿತ್ತು. ತೀವ್ರ ಅನಾರೋಗ್ಯದಲ್ಲಿದ್ದ ಈಕೆಯನ್ನು ಬಳಿಕ ಕೋವಿಡ್ ವಾರ್ಡ್ಗೆ ದಾಖಲಿಸಿ ವೆಂಟಿಲೇಟರ್ ವ್ಯವಸ್ಥೆಯಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಶವ ಸುಡಲು ವಿರೋಧ
ಈಕೆಯ ಅಂತ್ಯ ಸಂಸ್ಕಾರವನ್ನು ನಗರದ ಹೈ ಚರ್ಚ್ ಬಳಿ ಸ್ಮಶಾನದಲ್ಲಿ ನೆರವೆರಿಸಲು ಹೋದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರು ಕೋವಿಡ್ ಮಾರ್ಗಸೂಚಿಯಂತೆ ಮಾಡ್ತಿದ್ದಾಗ ವಿರೋಧ ವ್ಯಕ್ತಪಡಿಸಿದಾಗ ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ.