ಬಂಟ್ವಾಳ: ಕೊರೊನಾ ಸೋಂಕು ತಗುಲಿರುವುದು ಗೊತ್ತಿದ್ದರೂ ನಿರ್ಲಕ್ಷಿಸಿ, ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಯುವಕನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪಿಡಿಒ ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ನಿವಾಸಿ ರಾಜೇಶ್ ಬೊಳ್ಳುಕಲ್ಲು ಎಂಬುವವರಿಗೆ ಮೇ 10ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಮೇ 11ರಂದು ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಹಾಯಕಿ 14 ದಿನ ಮನೆಯಿಂದ ಹೊರಗೆ ಹೋಗದಂತೆ ಹಾಗೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚಿಸಿದ್ದರು.

ಮೇ 13ರಂದು ಪಿಡಿಒ ಅವರು, ರಾಜೇಶ್ ಮನೆಗೆ ಭೇಟಿ ನೀಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ಈ ಕುರಿತು ನೆರೆಯವರಲ್ಲಿ ವಿಚಾರಿಸಿದಾಗ, ಮನೆಯವರೆಲ್ಲಾ ಮದುವೆಗೆಂದು ಕಾರ್ಕಳಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ. ಅದಾದ ಬಳಿಕ ರಾಜೇಶ್ ಬೊಳ್ಳುಕಲ್ಲು ಪಿಡಿಒಗೆ ಕರೆ ಮಾಡಿ, ನಾನು ಮಣಿನಾಲ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಆದರೆ, ನಾನು ಪಾಸಿಟಿವ್ ವರದಿ ಬಂದ ಮರುದಿನವೇ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ಅದರಲ್ಲಿ ನೆಗೆಟಿವ್ ವರದಿ ಬಂದಿದೆ. ಮತ್ಯಾಕೆ ನಾನು ಹೋಂ ಕ್ವಾರಂಟೈನ್ನಲ್ಲಿ ಇರಬೇಕು ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ ಎಂದು ಪಿಡಿಒ ದೂರಿದ್ದಾರೆ.
ರಾಜೇಶ್ ಬೊಳ್ಳುಕಲ್ಲು ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ, ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಿಡಿಒ ದೂರಿನಲ್ಲಿ ತಿಳಿಸಿದ್ದಾರೆ.
ಓದಿ: ಕೋವಿಡ್ ಲಸಿಕೆಯ ಎಸ್ಕಾರ್ಟ್ ವಾಹನಕ್ಕೆ ಗುದ್ದಿದ ಲಾರಿ... ಇಬ್ಬರು ಪೊಲೀಸರು ಸಾವು!