ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮತ್ತೆ ಜೂನ್ 14ಕ್ಕೆ ಮುಂದೂಡಲಾಗಿದೆ.
ಮಳಲಿಯ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆ ವಿಚಾರದಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರದ ಬಗ್ಗೆ ವಿಹೆಚ್ಪಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ತಿರಸ್ಕರಿಸುವಂತೆ ಮತ್ತು ಈ ವಿಚಾರವು ವಕ್ಫ್ ಕೋರ್ಟ್ನ ವ್ಯಾಪ್ತಿಗೆ ಬರುವುದೆಂದು ಮಸೀದಿ ಆಡಳಿತ ಮಂಡಳಿ ವಾದ ಮಾಡುತ್ತಿದೆ.
ನಿನ್ನೆ ವಿಹೆಚ್ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಾಡಿದ್ದು, ಇಂದು ಮಸೀದಿ ಆಡಳಿತ ಮಂಡಳಿಯ ಪರ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದ್ದಾರೆ. ಮಳಲಿಯಲ್ಲಿ ಸರ್ಕಾರಿ ವಕ್ಫ್ ದಾಖಲೆ ಪ್ರಕಾರ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ಅದನ್ನು ಮಸೀದಿ ಅಂತ ಮತ್ತೆ ಸಾಬೀತಪಡಿಸುವ ಅಗತ್ಯ ಇರುವುದಿಲ್ಲ. ಮಸೀದಿ ಎಂದರೆ ವಕ್ಫ್ ಕಾನೂನಿನ ಪ್ರಕಾರ ಪ್ರಾರ್ಥನಾ ಸ್ಥಳವಾಗಿದ್ದು, ಅಂತಹ ಸ್ಥಳಗಳನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದಿಂದ ನೋಟಿಫಿಕೇಷನ್ ಆಗಬೇಕಾಗಿದೆ. ಆದರೆ ಮಳಲಿಯ ಮಸೀದಿ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ಇದನ್ನು ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್ಗೆ ಅಧಿಕಾರವು ಇಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಎಂ.ಪಿ ಶೆಣೈ ವಾದಿಸಿದರು.
ಇದಕ್ಕೆ ಪ್ರತಿ ವಾದ ನಡೆಸಲು ವಿಹೆಚ್ಪಿ ಪರ ವಕೀಲ ಚಿದಾನಂದ ಕೆದಿಲಾಯ ಕಾಲಾವಕಾಶ ಕೇಳಿದ್ದಾರೆ. ನ್ಯಾಯಾಲಯ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.
ಇದನ್ನೂ ಓದಿ: ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ: ಮುತಾಲಿಕ್