ನೆಲ್ಯಾಡಿ: ಕಳೆದ ನಾಲ್ಕು ದಿನದ ಹಿಂದೆ ವಿಷ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ (Mangalore Wenlock District Hospital) ಚಿಕಿತ್ಸೆ ಪಡೆಯುತ್ತಿದ್ದ ಇಚ್ಲಂಪಾಡಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇಚ್ಲಂಪಾಡಿ ಗ್ರಾಮದ ನಿಡ್ಯಡ್ಕ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಸೌಮ್ಯ(36) ಮೃತ ಮಹಿಳೆ. ಗೋಳಿಯಡ್ಕದ ಗೇರುಬೀಜದ ಫ್ಯಾಕ್ಟರಿ (Cashew factory) ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ, ನವೆಂಬರ್ 9ರಂದು ಸಂಜೆ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಪತ್ನಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡ ಬೆನ್ನಲ್ಲೇ ಆಕೆಯ ಪತಿ ವೆಂಕಟೇಶ್ ಸಹ ಇಲಿ ಪಾಷಾಣ ಸೇವಿಸಿದ್ದರು.
ಈ ಹಿನ್ನೆಲೆ ಸ್ಥಳೀಯರು ಇಬ್ಬರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸೌಮ್ಯ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಅವರನ್ನು ಮರುದಿನ ಬೆಳಗ್ಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಸೌಮ್ಯ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿ ವೆಂಕಟೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ವೈದ್ಯರು ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಉಪ್ಪಿನಂಗಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವೆಂಕಟೇಶ್, ತಮಿಳುನಾಡಿಗೆ ಹೋಗಲು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ತೆರಳಿರುವ ಕುರಿತು ಮಾಹಿತಿ ಪಡೆದುಕೊಂಡ ಉಪ್ಪಿನಂಗಡಿ ಪೊಲೀಸರು, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವೆಂಕಟೇಶ್ ಮೂಲತಃ ತಮಿಳುನಾಡು ನಿವಾಸಿಯಾಗಿದ್ದು, ಈತ ತಮಿಳುನಾಡಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಚ್ಲಂಪಾಡಿಯ ಸೌಮ್ಯರನ್ನು ಪ್ರೀತಿಸಿ ಬಳಿಕ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.