ಮಂಗಳೂರು: ಬೆಂಗಳೂರು ಕಂಬಳಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರಲ್ಲೂ ಕುತೂಹಲ ಆವರಿಸಿದೆ. ಕರಾವಳಿ ಜಿಲ್ಲೆಗಳ ಜಾನಪದೀಯ ಕ್ರೀಡೆ ಕಂಬಳ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರು ಕಂಬಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದೆ.
ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿರುವ ಕೋಣಗಳು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಿಂದ ತೆರಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಿಂದ ಕಂಬಳದ ಕೋಣಗಳು ಒಟ್ಟಾಗಿ ತೆರಳಲಿದೆ. ಈಗಾಗಲೇ ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು 150 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 150 ಜೋಡಿ ಕೋಣಗಳು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಡಲಿವೆ.
ಉಪ್ಪಿನಂಗಡಿಯಿಂದ ಬೆಳಗ್ಗೆ 9 ಗಂಟೆಗೆ ಕಂಬಳದ ಕೋಣಗಳನ್ನು ಕೊಂಡೊಯ್ಯಲು ನಿರ್ಧರಿಸಲಾಗಿದೆ. ವಾಹನಗಳಲ್ಲಿ ಕೋಣಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತದೆ. ದಾರಿ ಮಧ್ಯೆ ಹಾಸನದಲ್ಲಿ ಕೋಣಗಳಿಗೆ ವಿಶ್ರಾಂತಿ ನೀಡಿ ಅಲ್ಲಿ ಸಭೆ ನಡೆಸಿ, ಬಳಿಕ ಬೆಂಗಳೂರಿಗೆ ಪ್ರಯಾಣ ಮುಂದುವರಿಯಲಿದೆ.
ದ.ಕ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ''ಬೆಂಗಳೂರು ಕಂಬಳದಲ್ಲಿ 150 ಜೋಡಿ ಕೋಣಗಳ ಮಾಲೀಕರು ಭಾಗವಹಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ. ನಾಳೆ ಬೆಳಗ್ಗೆ ಉಪ್ಪಿನಂಗಡಿಯಿಂದ ಕೋಣಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ಇದರ ಜೊತೆಗೆ ಕೋಣಗಳಿಗೆ 1 ಟ್ಯಾಂಕರ್ ನೀರನ್ನು ಮಂಗಳೂರಿನಿಂದ ಕೊಂಡೊಯ್ಯಲಾಗುತ್ತದೆ. ಆ್ಯಂಬುಲೆನ್ಸ್ ಜೊತೆಗೆ ಪಶುವೈದ್ಯರು ಇರಲಿದ್ದಾರೆ'' ಎಂದು ತಿಳಿಸಿದರು.
ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಭಾಗಿ: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜರುಗಲಿರುವ ಬೆಂಗಳೂರು ಕಂಬಳಕ್ಕೆ ಕನಿಷ್ಠ 3ರಿಂದ 5 ಲಕ್ಷ ಜನರು ಬರುವ ನಿರೀಕ್ಷೆಯಿದೆ. ಇದರ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನ.24, 25 ಮತ್ತು 26ರಂದು ಅರಮನೆ ಮೈದಾನದಲ್ಲಿ ಜರುಗಲಿರುವ ಬೆಂಗಳೂರು ಕಂಬಳದ ಸಿದ್ಧತೆ ಸಲುವಾಗಿ ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ ಭಾಷಾ ಸಂಘಟನೆಗಳ ಜೊತೆ ಬೃಹತ್ ಸಮಾಲೋಚನಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ಕಂಬಳ ಕ್ರೀಡೆ ಐತಿಹಾಸಿಕ ಕಾರ್ಯಕ್ರಮವಾಗಿದೆ. ಕರಾವಳಿಯ ಎಲ್ಲ ಸಮುದಾಯದವರು ಒಂದೆಡೆ ಸೇರಲು ಬೃಹತ್ ವೇದಿಕೆ ಆಗಲಿದೆ. ಕರಾವಳಿಯ ವಿವಿಧ ಭಾಷೆ, ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಕಂಬಳಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: ದಾವಣಗೆರೆ: ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ ಪೊಲೀಸ್ ಸಿಬ್ಬಂದಿ