ಮಂಗಳೂರು: ಮುಸ್ಲಿಂ ಸಮುದಾಯ ಒಂದು ತಿಂಗಳ ರಂಜಾನ್ ಉಪವಾಸ ವೃತವನ್ನು ಆಚರಿಸಿ ಇದೀಗ ರಂಜಾನ್ ಹಬ್ಬದ ತಯಾರಿಗೆ ಸಿದ್ಧತೆ ನಡೆಸುತ್ತಿದೆ. ರಂಜಾನ್ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಮುಖವಾಗಿ ಬೇಕಾದದ್ದು ಟೋಪಿ ಮತ್ತು ಸುಗಂಧ ದ್ರವ್ಯ. ಇದರ ಖರೀದಿ ಭರಾಟೆ ಈಗಾಗಲೇ ನಗರದಲ್ಲಿ ಆರಂಭವಾಗಿದೆ.
ಮಂಗಳೂರಿನಲ್ಲಿ ಕಳೆದ 85 ವರ್ಷಗಳಿಂದ ಟೋಪಿ ಮತ್ತು ಸುಗಂಧ ದ್ರವ್ಯದ ವ್ಯಾಪಾರ ಮಾಡುತ್ತಿರುವ ಮಂಗಳೂರಿನ ಬಂದರ್ನಲ್ಲಿರುವ ಜೆಎಂ ರಸ್ತೆಯಲ್ಲಿರುವ ಅಸ್ಗರ್ ಆಲಿ ಅತ್ತರ್ ವಾಲ ಅಂಗಡಿಯಲ್ಲಿ ಬಗೆ ಬಗೆಯ ಟೋಪಿಗಳು, ಸುಗಂಧ ದ್ರವ್ಯಗಳು ಮಾರಾಟಕ್ಕೆ ಇದೆ. ಹಿಂದೆ ಬಿಳಿ ಟೋಪಿಯ ಖರೀದಿ ಇದ್ದರೆ, ಇತ್ತೀಚೆಗೆ ಯುವಕರು ಕಪ್ಪು ಬಣ್ಣದ ಟೋಪಿಗಳತ್ತ ಆಕರ್ಷಿತರಾಗಿದ್ದಾರೆ. ಬಗೆ ಬಗೆಯ ಬಣ್ಣದ ಟೋಪಿಗಳು , ಹಲವು ಬ್ರಾಂಡ್ಗಳ ಸುಗಂಧ ದ್ರವ್ಯಗಳು ಇಲ್ಲಿ ಮಾರಾಟಕ್ಕೆ ಇಡಲಾಗಿದ್ದು, ರಂಜಾನ್ ಹಬ್ಬಕ್ಕಾಗಿಯೇ ಇವುಗಳನ್ನು ತರಿಸಲಾಗಿದೆ.
ಸಾಧಾರಣವಾಗಿ ಉಪವಾಸ ಸಂದರ್ಭದಲ್ಲಿ ಸುಗಂಧ ದ್ರವ್ಯ ಬಳಸುವುದಿಲ್ಲ. ರಂಜಾನ್ ಹಬ್ಬದ ದಿನ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡುವ ಮೊದಲು ಸುಗಂಧ ದ್ರವ್ಯ ಬಳಸುತ್ತಾರೆ. ಈ ಕಾರಣಕ್ಕಾಗಿ ರಂಜಾನ್ ಹಬ್ಬದ ದಿನ ಸುಗಂಧ ದ್ರವ್ಯಕ್ಕೂ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತದೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ರಂಜಾನ್ ಹಬ್ಬದ ತಯಾರಿ ನಡೆಯುತ್ತಿದ್ದು, ಸುಗಂಧ ದ್ರವ್ಯ ಮತ್ತು ಟೋಪಿಗಳ ಖರೀದಿ ಜೋರಾಗಿ ನಡೆಯುತ್ತಿದೆ.
ಮಂಗಳೂರಿನಲ್ಲಿ ಕೇರಳದ ಚಂದ್ರ ದರ್ಶನದ ಆಧಾರದ ಮೇಲೆ ರಂಜಾನ್ ಹಬ್ಬದ ಆಚರಣೆ ಮಾಡಲಾಗುತ್ತಿತ್ತು. ಹೀಗಾಗಿ ಒಂದು ದಿನ ಮೊದಲು ಹಬ್ಬ ಇರುತ್ತಿತ್ತು. ಆದರೆ ನಿನ್ನೆ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಬುಧವಾರವೇ ಹಬ್ಬ ನಡೆಯಲಿದೆ.