ಮಂಗಳೂರು: ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ನೀಡಿರುವ ಆಹಾರ ಕಿಟ್ನಲ್ಲಿ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಶಾಮೀಲಾಗಿದ್ದಾರೆ ಎಂಬ ಗುಮಾನಿ ಇದೆ. ಆದ್ದರಿಂದ ಇದನ್ನು ಲೋಕಾಯುಕ್ತರಿಂದ ತನಿಖೆ ನಡೆಸಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ನ ಮಾಧ್ಯಮ ವಕ್ತಾರ ಎ.ಸಿ.ವಿನಯ್ ರಾಜ್ ಆಗ್ರಹಿಸಿದರು.
ಜಿಲ್ಲಾಡಳಿತಕ್ಕೆ ಆಹಾರ ಕಿಟ್ಗಳನ್ನು ತಯಾರಿಸಿ ಕೊಟ್ಟ ಖಾಸಗಿ ಸಂಸ್ಥೆಯೇ ಶಾಸಕರು, ಸಂಸದರಿಗೂ ಕಿಟ್ ತಯಾರಿಸಿದೆ. ಕಿಟ್ ಅನ್ನು ಮ.ನ.ಪಾ ಕಟ್ಟಡದ ಮುಂಭಾಗದಲ್ಲಿರುವ ಕಟ್ಟಡದಲ್ಲಿ ತಯಾರಿಸಲಾಗಿದ್ದು, ಮನಪಾ ಸದಸ್ಯರಾದಿ ಎಲ್ಲರಿಗೂ ಹಂಚಲಾಗಿತ್ತು. ಅಲ್ಲದೆ ಜಿಲ್ಲಾಡಳಿತ ಕಿಟ್ಗಾಗಿ ಆಹಾರ ಸಾಮಾಗ್ರಿಗಳನ್ನು ಖರೀದಿಸುವಾಗ ಕೆಪಿಟಿಟಿ ನಿಯಮವನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ಇದನ್ನು ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವಾಹನ ಓಡಾಟ ಹಾಗೂ ಇತರ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಿರೋದು ತಪ್ಪು ನಿರ್ಧಾರ. ಜನಸಂದಣಿ ಹೆಚ್ಚಾಗುವ ವ್ಯಾಪಾರ ಕೇಂದ್ರಗಳು ತೆರೆಯುವ ಹಾಗಿಲ್ಲ. ಹೀಗಿರುವಾಗ ಯಾಕೆ ಜಿಲ್ಲಾಡಳಿತ ಈ ರೀತಿಯಲ್ಲಿ ಸಡಿಲಿಕೆ ಮಾಡಿದೆ ಎಂದು ಪ್ರಶ್ನಿಸಿದರು.
ಪಕ್ಕದ ಉಡುಪಿ ಜಿಲ್ಲೆಯಲ್ಲಿ ಹಸಿರು ವಲಯ ಇದ್ದರೂ ಮಧ್ಯಾಹ್ನ 1ಗಂಟೆಯವರೆಗೆ ಮಾತ್ರ ಸಡಿಲಿಕೆ ಮಾಡಲಾಗಿದೆ. ನಮ್ಮ ಉಸ್ತುವಾರಿ ಸಚಿವರು ಅದೇ ಜಿಲ್ಲೆಯರಾಗಿದ್ದರೂ ಅವರು ಯಾಕೆ ಈ ನಿರ್ಧಾರ ಕೈಗೊಂಡರು? ಇಂತಹ ನಿರ್ಲಕ್ಷ್ಯದ ನಡೆಯಿಂದ ದ.ಕ. ಜಿಲ್ಲೆ ಮತ್ತೆ ಕೆಂಪು ವಲಯಕ್ಕೆ ಹೋಗಲಿದೆ ಎಂದು ಎ.ಸಿ.ವಿನಯ್ ರಾಜ್ ಹೇಳಿದರು.