ಮಂಗಳೂರು: ನಗರದ ಪಣಂಬೂರು ನವ ಮಂಗಳೂರು ಬಂದರಿಗೆ ಇತ್ತಿಚೇಗೆ ವಿದೇಶದಿಂದ ಪ್ರವಾಸಿ ಹಡುಗು ಬಂದಿದೆ. ಆದ್ರೆ ಹಡಗಿನಲ್ಲಿದ್ದ ಚೀನಾ ದೇಶದ ಮೂವರು ನಾಗರಿಕರಿಗೆ ನಗರದ ಪ್ರವೇಶಕ್ಕೆ ಅವಕಾಶ ನೀಡಿಲ್ಲವೆಂದು ಎನ್ಎಂಪಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಡೆದ ತುರ್ತು ಸಭೆಯಲ್ಲಿ ಎನ್ಎಂಪಿಟಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೊರೊನಾ ವೈರಸ್ ರೋಗದ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಯಾವುದೇ ಭಯ, ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ರಾಜ್ಯದಲ್ಲಿ ಈ ರೋಗದಿಂದ ಬಾಧಿತರಾದ ಯಾವುದೇ ಮಾಹಿತಿ ಇದುವರೆಗೆ ಇಲ್ಲ. ಆದರೂ, ದ.ಕ. ಜಿಲ್ಲೆಯ ಪಕ್ಕದ ಕೇರಳ ರಾಜ್ಯದಲ್ಲಿ ಇದು ಕಂಡು ಬಂದಿರುವ ಹಿನ್ನೆಲೆ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಯಾವುದೇ ಸಂಶಯ, ಮಾಹಿತಿ ಹಾಗೂ ನೆರವಿಗೆ ಆರೋಗ್ಯ ಇಲಾಖೆಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು. ಜಿಲ್ಲಾಡಳಿತವು ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಜಿಲ್ಲೆಗೆ ಪ್ರಮುಖ ಪ್ರವೇಶ ಸ್ಥಳವಾಗಿರುವ ಏರ್ಪೋರ್ಟ್, ರೈಲು ನಿಲ್ದಾಣಗಳಲ್ಲಿ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಚೀನಾದಿಂದ ಮಂಗಳೂರಿಗೆ ನೇರ ವಿಮಾನ ಯಾನ ಇಲ್ಲದೇ ಇರುವುದರಿಂದ ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ. ಆದರೂ ಕೆಲ ದಿನಗಳ ಹಿಂದೆ ಚೀನಾದಿಂದ ಜಿಲ್ಲೆಗೆ ಬಂದ ಇಬ್ಬರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ರೋಗ ಲಕ್ಷಣ ಅವರಲ್ಲಿ ಕಂಡುಬಂದಿರುವುದಿಲ್ಲ ಎಂದು ಅವರು ಹೇಳಿದರು.