ಬಂಟ್ವಾಳ: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಬಂಟ್ವಾಳ ಪೇಟೆಯ ಪತ್ರಿಕೆ ವಿತರಕ ಸೇರಿ ಆರು ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಎರಡು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿದ್ದ ಪೊಳಲಿ ದ್ವಾರ ಸಮೀಪದಲ್ಲಿರುವ ವೈದ್ಯರ ಮನೆಯಲ್ಲಿದ್ದ ಅವರ ತಂದೆ, ತಾಯಿ, ಪತ್ನಿ ಮತ್ತು ಪುತ್ರ ಸೇರಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಸೋಂಕು ತಗುಲಿದೆ. ವೈದ್ಯರ ತಂದೆ ಮತ್ತು ಪತ್ನಿಯೂ ವೈದ್ಯರಾಗಿದ್ದಾರೆ.
ಫರಂಗಿಪೇಟೆಯ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ದ ಅವರ ವರದಿ ಪಾಸಿಟಿವ್ ಬಂದಿದ್ದು, ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ನಿಗೂಢವಾಗಿದೆ. ಮಂಗಳೂರು ಧಕ್ಕೆಯಲ್ಲಿ ಕೆಲಸ ಮಾಡುವ ಅವರಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ವೈದ್ಯರ ಸಲಹೆಯಂತೆ ಕೋವಿಡ್ ಪರೀಕ್ಷೆ ನಡೆಸಿದ್ದಾರೆ. ಆ ಬಳಿಕ ಅವರು ಮನೆಯಲ್ಲೇ ಇದ್ದರು. ಸೋಂಕು ದೃಢಪಟ್ಟ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಪೇಟೆಯ ನಿವಾಸಿ, ಪತ್ರಿಕೆ ವಿತರಕರೊಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇವರ ಮನೆ ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿದೆ.
ಸದ್ಯ ಇವರ ಹಾಗೂ ಅಕ್ಕಪಕ್ಕದ ಅಂಗಡಿಗಳನ್ನು ಮುಚ್ಚಲಾಗಿದೆ. ಬಂಟ್ವಾಳ ಪೇಟೆಯ ಕೆಲ ಹೊಟೇಲ್ಗಳು ಕೂಡ ಸ್ವಯಂಪ್ರೇರಿತವಾಗಿ ಮುಚ್ಚಿವೆ. ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸೋಂಕು ಭೀತಿ ಹೆಚ್ಚುತ್ತಿರುವುದರಿಂದ ತಾಲೂಕು ಪಂಚಾಯಿತಿ ಕಚೇರಿಗೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ತಾ.ಪಂ. ಕಚೇರಿಯ ಗೇಟಿನಲ್ಲಿ ಫಲಕ ಹಾಕಲಾಗಿದೆ.