ಮಂಗಳೂರು: ಕೊರೊನಾ ಹಾವಳಿ ಬಳಿಕ ದೇವಾಲಯಗಳು ಆರ್ಥಿಕ ಸಂಕಷ್ಡಕ್ಕೀಡಾಗಿದೆ. ಕೊರೊನಾದ ಭಯದಿಂದ ದೇವಸ್ಥಾನಗಳಿಗೆ ಆಗಮಿಸುವ ಭಕ್ತರ ಸಂಖ್ಯೆ ಮತ್ತು ಸೇವೆಗಳ ಸಂಖ್ಯೆ ಕಡಿಮೆಯಾಗಿರುವುದು ದೇವಸ್ಥಾನದ ಆರ್ಥಿಕ ಸಂಕಷ್ಟಕ್ಕೆ ಕಾರಣ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವೊಂದು ದೇವಸ್ಥಾನವು ಇದನ್ನು ಸರಿದೂಗಿಸಲು ಸೇವೆಯ ದರವನ್ನು ಹೆಚ್ಚಿಸಿಲ್ಲ.
ಕೊರೊನಾ ವೈರಸ್ ಹಾವಳಿಯಿಂದ ಸಂಕಷ್ಟ ಎಲ್ಲಾ ವಿಭಾಗಗಳನ್ನು ತಲುಪಿದ್ದು ದೇವಸ್ಥಾನವನ್ನು ಈ ಸಂಕಷ್ಟ ಬಿಟ್ಟಿಲ್ಲ. ಸಂಕಷ್ಟ ಬಂದರೆ ವೆಂಕಟರಮಣನನ್ನು ಭಕ್ತರು ನೆನೆದರೆ ಈ ಕೊರೊನಾ ಸಂದರ್ಭದಲ್ಲಿ ವೆಂಕಟರಮಣನೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ದೇಶದ ಹೆಚ್ಚಿನ ದೇವಸ್ಥಾನಗಳು ಸಂಕಷ್ಟಕ್ಕೀಡಾಗಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳು ಆರ್ಥಿಕ ಸಂಕಷ್ಟಕ್ಕೀಡಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಗೋಕರ್ಣನಾಥ, ಮಂಗಳಾದೇವಿ , ಶರವು ಮಹಾಗಣಪತಿ ಮೊದಲಾದ ಪ್ರಮುಖ ದೇವಸ್ಥಾನಗಳಿದೆ. ಈ ದೇವಸ್ಥಾನಗಳು ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ವೇಳೆ ಸಂಪೂರ್ಣ ಬಂದ್ ಆಗಿತ್ತು. ಅನ್ಲಾಕ್ ಬಳಿಕ ದೇವಸ್ಥಾನಗಳು ಪುನರಾರಂಭವಾದರೂ ಭಕ್ತರ ಸಂಖ್ಯೆ ಕಡಿಮೆಯಿದೆ. ದೇವಸ್ಥಾನಗಳಲ್ಲಿ ಭಕ್ತರು ನೀಡುವ ಸೇವೆಯ ಸಂಖ್ಯೆಯು ಕಡಿಮೆಯಾಗಿರುವುದರಿಂದ ದೇವಸ್ಥಾನಕ್ಕೆ ಆದಾಯವು ಹರಿದು ಬರುತ್ತಿಲ್ಲ.
ದೇಶದ ಕೆಲವೊಂದು ಪ್ರಮುಖ ದೇವಸ್ಥಾನಗಳು ದೇವಸ್ಥಾನದ ಖರ್ಚುಗಳನ್ನು ಸರಿದೂಗಿಸಲು ಸೇವೆಯ ದರವನ್ನು ಹೆಚ್ಚಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವೊಂದು ದೇವಸ್ಥಾನಗಳು ಸೇವೆಯ ದರವನ್ನು ಹೆಚ್ಚಿಸುವ ಪ್ರಯತ್ನ ಮಾಡಿಲ್ಲ. ಹಲವು ಪ್ರಮುಖ ದೇವಸ್ಥಾನಗಳು ವಸತಿಗೃಹ, ಅಂಗಡಿ ಬಾಡಿಗೆ ನೀಡುವುದು, ಸಭಾಂಗಣ ಸೇರಿದಂತೆ ಕೆಲವೊಂದು ಮೂಲಗಳಿಂದ ಆದಾಯ ಪಡೆಯುತ್ತಿದೆ. ಇವುಗಳಿಂದ ಬರುವ ಆದಾಯದಿಂದ ದೇವಸ್ಥಾನಗಳಲ್ಲಿ ಈ ಹಿಂದೆ ಇದ್ದ ವರಮಾನವನ್ನು ಸರಿದೂಗಿಸಲು ಯತ್ನಿಸುತ್ತಿದೆ.
ಕೊರೊನಾ ಪ್ರಕರಣ ಕಡಿಮೆಯಾದರೆ ಮತ್ತೊಮ್ಮೆ ಚಟುವಟಿಕೆಗಳು ಯಥಾಸ್ಥಿತಿಗೆ ಬಂದು ದೇವಸ್ಥಾನಗಳಿಗೆ ಭಕ್ತರು ಬರುವ ಸಂಖ್ಯೆ ಹೆಚ್ಚಬಹುದೆಂಬುದು ದೇವಸ್ಥಾನ ಆಡಳಿತ ಮಂಡಳಿಗಳ ನಿರೀಕ್ಷೆ.