ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಗೆ ಕೊರೊನಾ ಸೋಂಕು ದೃಢಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ನಗರದ ಸಬ್ ಜೈಲಿನಲ್ಲಿದ್ದ ಈ ವಿಚಾರಣಾಧೀನ ಕೈದಿ ಮನೋರೋಗದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಆರೋಗ್ಯದಲ್ಲಿ ವ್ಯತ್ಯಾಸಗೊಂಡ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ರವಾನಿಸಲಾಗಿತ್ತು.
ಇದೀಗ ಆತನ ವರದಿ ಬಂದಿದ್ದು, ಆತನಿಗೆ ಸೋಂಕು ದೃಢಗೊಂಡಿದೆ. ಈ ವಿಚಾರಣಾಧೀನ ಕೈದಿಗೆ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಯಿಂದ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದೀಗ ಆತನನ್ನು ಪ್ರತ್ಯೇಕವಾಗಿ ಕ್ವಾರೆಂಟೈನ್ ಇಡಲಾಗಿದೆ.