ಮಂಗಳೂರು (ದ.ಕ): ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯನ್ನು ಗೋವಾದ ಪಣಜಿಗೆ ಸ್ಥಳಾಂತರಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಯು.ಟಿ.ಖಾದರ್, ಬಿಜೆಪಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರ ವಹಿಸಿದ ಬಳಿಕ ದ.ಕ ಜಿಲ್ಲೆ ಹಾಗೂ ಮಂಗಳೂರಿಗೆ ಬಹಳಷ್ಟು ಅನ್ಯಾಯವಾಗಿದ್ದು, ಸರ್ಕಾರಿ ಸ್ವಾಮ್ಯದ ಅನೇಕ ಸಂಸ್ಥೆಗಳು ಖಾಸಗೀಕರಣ ಅಥವಾ ಸ್ಥಳಾಂತರ ಆಗುತ್ತಿವೆ.
ಉತ್ತಮ ಯೋಜನೆಗಳನ್ನು ತರುವುದರ ಬದಲು ಇರುವ ಸಂಸ್ಥೆಗಳನ್ನು ಬೇರೆಡೆಗೆ ಕೊಂಡೊಯ್ಯಲು ಸಹಕರಿಸಿ, ದ.ಕ ಜಿಲ್ಲೆಗೆ ದ್ರೋಹ ಬಗೆಯುತ್ತಿದ್ದಾರೆ. ಇದೀಗ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯನ್ನು ಗೋವಾಕ್ಕೆ ಕೊಂಡೊಯ್ಯಲಾಗುತ್ತಿದೆ.
ಹಾಗಾದರೆ ದ.ಕ ಜಿಲ್ಲೆಯ ಸಂಸದರು ಹಾಗೂ ಶಾಸಕರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಇಲ್ಲಿಗೆ ಯಾವುದಾದರೂ ಯೋಜನೆ ತರುವ ಸಂದರ್ಭದಲ್ಲಿ ಯಾಕೆ ಮೂಗರಾಗುತ್ತಿದ್ದಾರೆ. ಬಿಜೆಪಿಗರು ಭಾವನಾತ್ಮಕ ವಿಚಾರದಿಂದ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾರೆ. ಜನ ಇದನ್ನು ಧಿಕ್ಕರಿಸಿ, ಬಿಜೆಪಿ ವಿರುದ್ಧ ಜನಜಾಗೃತಿಗಾಗಿ ಪ್ರತಿಭಟನೆ ನಡೆಸಬೇಕು ಎಂದರು.