ಮಂಗಳೂರು: ಉತ್ತರ ಪ್ರದೇಶದ ಹತ್ರಾಸ್ ಪ್ರಕರಣ ಖಂಡಿಸಿ ಅಮಾನುಷ ವಿಕೃತಿ ಮೆರೆದಿರುವ ಆರೋಪಿಗಳಿಗೆ ಶೀಘ್ರ ಮರಣದಂಡನೆ ವಿಧಿಸಬೇಕೆಂದು ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ನಿನ್ನೆ ಮನಪಾ ಮುಂಭಾಗ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗ ಮೊಂಬತ್ತಿ ಉರಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರರ್ಕಾರದ ವಿರುದ್ಧ ಘೋಷಣೆ ಕೂಗಿ ಯೋಗಿ ಆದಿತ್ಯನಾಥ್ ಮತ್ತು ಮೋದಿ ಪ್ರತಿಕೃತಿ ದಹಿಸಿದರು.
ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಸರ್ವಾಧಿಕಾರಿ ಧೋರಣೆಗೆ ನೈಜ ಉದಾಹರಣೆ ಬಿಜೆಪಿ ಸರ್ಕಾರ. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ ನಡೆದು, ಬಳಿಕ ಅವಳು ಮೃತಪಡುತ್ತಾಳೆ. ಕುಟುಂಬಸ್ಥರಿಗೆ ಸಂತ್ರಸ್ತೆಯ ಮೃತದೇಹದ ಮುಖವನ್ನೂ ಸಹ ತೋರಿಸದೆ ಯೋಗಿ ಸರ್ಕಾರ ಆಕೆಯ ಮೃತದೇಹವನ್ನು ದಹನ ಮಾಡುವ ಕೆಲಸ ಮಾಡುತ್ತದೆ. ಈ ಮೂಲಕ ಸಾಕ್ಷಿಗಳನ್ನು ನಾಶ ಮಾಡುವಂತಹ ಷಡ್ಯಂತ್ರ ನಡೆಯುತ್ತದೆ. ಯೋಗಿ ಸರ್ಕಾರ ಸಂತ್ರಸ್ತೆಯ ಶವ ಸುಟ್ಟು ಸಾಕ್ಷಿಗಳನ್ನು ನಾಶಪಡಿಸಬಹುದು. ಆದರೆ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಠಾಕೂರ್ ಸಮುದಾಯದ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ ನಮ್ಮ ಹೋರಾಟ ನಡೆಯುತ್ತಿರುತ್ತದೆ. ಯೋಗಿ ಆದಿತ್ಯನಾಥ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.