ಬಂಟ್ವಾಳ: ಕಾಂಗ್ರೆಸ್ ಮೈಸೂರು ವಿಭಾಗೀಯ ಸಮಾವೇಶ ಬಂಟ್ವಾಳದಲ್ಲಿ ಆಯೋಜಿಸಲಾಗುತ್ತಿದ್ದು, ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ಜರುಗಲಿರುವ ಸಮಾರಂಭಕ್ಕೆ ಇಡೀ ಬಿ.ಸಿ. ರೋಡ್ ಪಕ್ಷದ ಬಾವುಟಗಳಿಂದ ಕಂಗೊಳಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ-75ರ ಸನಿಹವಿರುವ ಸಾಗರ್ ಸಭಾಂಗಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೃಹತ್ ಎಲ್ಇಡಿ ಪರದೆ ಮೂಲಕ ಕಲಾಪ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 600 ಪ್ರತಿನಿಧಿಗಳು ಆಸೀನರಾಗಲು ಸಾಧ್ಯವಿದೆ. ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತೆಗಳು ನಡೆದಿವೆ.
ಇದನ್ನೂ ಓದಿ...ಲಂಚಕ್ಕೆ ಬೇಡಿಕೆ ಇಟ್ಟ ಎಸ್ಡಿಎ ಅಧಿಕಾರಿ: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ
ಬಿ.ಸಿ. ರೋಡ್ ಕೈಕಂಬ ಪೊಳಲಿ ದ್ವಾರದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಬಂಟ್ವಾಳದ ಸೇತುವೆಯ ಇಕ್ಕೆಲ ಹಾಗೂ ಕಾರ್ಯಕ್ರಮ ನಡೆಯುವ ಸಭಾಂಗಣ, ರಸ್ತೆಯ ಎರಡೂ ಬದಿಯಲ್ಲಿ ಪಕ್ಷದ ಬಾವುಟ, ಬಂಟಿಂಗ್ಸ್ಗಳನ್ನು ಹಾಕಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು, ಮಾಜಿ ಸಚಿವರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಗೊಳಪಡುವ ಸಾಧ್ಯತೆ ಇದೆ.
ಪ್ರತಿನಿಧಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಬಿ.ರಮಾನಾಥ ರೈ ಹೇಳಿದರು. ಜನಸಾಮಾನ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯಿಂದ ಸಮಸ್ಯೆ ಅನುಭವಿಸುವ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ತಿಳಿಸಿದರು.