ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಾಹುಲ್ ಹಮೀದ್ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರು ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಪೊಲೀಸರು ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಉಪ್ಪಿನಂಗಡಿ ಗಲಭೆಗೆ ಮೂಲ ಕಾರಣವಾದದ್ದು ಇಳಂತಿಲದಲ್ಲಿ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ದಾಳಿ. ಈ ದಾಳಿ ನಡೆದ ಒಂದೇ ಗಂಟೆಯಲ್ಲಿ ಪೊಲೀಸರು ಜನಾರ್ದನ ಮತ್ತು ಶ್ರೀಧರ ಎಂಬವರನ್ನು ಬಂಧಿಸಿದ್ದರು.
ಅದೇ ದಿನ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಬಂಧಿತರನ್ನು ಬಿಡಿಸಿಕೊಂಡು ಹೋಗಿದ್ದಾರೆ. ಮರುದಿನ ಆರೋಪಿಗಳ ಬಂಧನಕ್ಕೆ ಒತ್ತಾಯ ಕೇಳಿ ಬಂದಾಗ ಅದೇ ಆರೋಪಿಗಳನ್ನು ಬಂಧಿಸಿದ್ದಾರೆ. ಇದಾದ ಮರುದಿನ ಮೀನಿನ ವ್ಯಾಪಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪರಿಚಯವಿತ್ತು ಎಂಬ ಕಾರಣಕ್ಕೆ ಯುವಕರನ್ನು ಠಾಣೆಯಲ್ಲಿ ಕೂರಿಸಿದ್ದಾರೆ. ಆದರೆ ಆರೋಪಿಗಳ ಪರಿಚಯವಿದ್ದ ಕಾರಣಕ್ಕೆ ಹರೀಶ್ ಪೂಂಜಾರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ಕಿಡಿಗೇಡಿಗಳ ಕೃತ್ಯದಿಂದ ಜಿಲ್ಲೆಯಲ್ಲಿ ಶಾಂತಿ ಕದಡಿದೆ. ಈಗ ನಡೆಯುತ್ತಿರುವುದು ಕೋಮು ಸಂಘರ್ಷವಲ್ಲ. ಮುಸ್ಲಿಂ ಮತ್ತು ಆರ್ಎಸ್ಎಸ್ ನಡುವಿನ ಸಂಘರ್ಷವೂ ಅಲ್ಲ. ಈಗ ನಡೆಯುತ್ತಿರುವುದು ಎಸ್ಡಿಪಿಐ ಮತ್ತು ಸಂಘಪರಿವಾರದ ನಡುವಿನ ಹೋರಾಟವಷ್ಟೆ ಎಂದರು.
ಜಿಲ್ಲೆಯಲ್ಲಿ ಮತ್ತೆ ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಈಗಷ್ಟೇ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಕೋಮುಗಲಭೆಯನ್ನು ತಾಳುವ ಧಾರಣಾ ಶಕ್ತಿ ಜಿಲ್ಲೆಗಿಲ್ಲ. ಇಂತಹ ಕಿಡಿಗೇಡಿ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪ್ರವಾಸಿ ಟ್ಯಾಕ್ಸಿ ಸಹಾಯಧನ ಮಂಜೂರುಗೆ ಲಂಚ ಪ್ರಕರಣ : ಆರೋಪಿಗಳಿಗೆ ಶಿಕ್ಷೆ ಪ್ರಕಟ