ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಕೋವಿಡ್ ನಿಯಂತ್ರಣ ಮಾಡುವಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ, ಜಿಲ್ಲೆಯ ವಿರೋಧ ಪಕ್ಷದ ನಾಯಕರು ಬಿಡುವಾಗಿದ್ದು, ದಿನಕ್ಕೊಂದು ಪತ್ರಿಕಾಗೋಷ್ಠಿ ಮಾಡಿ ಜಿಲ್ಲೆಯ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದ್ದಾರೆ.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ಅಟಲ್ ಕೇಂದ್ರದಲ್ಲಿ ಮಾತನಾಡಿದ ಅವರು, ಮೋದಿಯವರ, ಬಿಜೆಪಿಯ ವರ್ಚಸ್ಸು ಹಾಳು ಮಾಡಬೇಕೆಂಬ ದೃಷ್ಟಿಯಿಂದ ಕೋವಿಡ್ ಸಂಕಷ್ಟದಲ್ಲಿ ಲಾಭವನ್ನು ಪಡೆದುಕೊಂಡ ಕಾಂಗ್ರೆಸಿಗರು ಜಾಗತಿಕ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಮಾಡಲು ಕೈಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಣ್ಣ ಇಡೀ ದೇಶದಲ್ಲೇ ಬಯಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಸ್ತಿತ್ವವನ್ನೇ ಮಮತಾ ಬ್ಯಾನರ್ಜಿಯವರಿಗೆ ಮಾರಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸ್ವಾರ್ಥಕ್ಕಾಗಿ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ನ ಇತಿಹಾಸ ಮರೆತು ಅಸ್ತಿತ್ವವನ್ನೇ ಮಾರಾಟ ಮಾಡುತ್ತಿದ್ದಾರೆ ಎಂದರು.
ಶಾಸಕ ಖಾದರ್ ಅವರು ಚಂಡಮಾರುತ ಬಂದ ಸಂದರ್ಭದಲ್ಲಿ ಉಳ್ಳಾಲ ಕಡಲ್ಕೊರೆತ ಮುಂದಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಇರುವ ಕಾಲದಲ್ಲಿ ಉಳ್ಳಾಲದಲ್ಲಿ ಕಡಲ್ಕೊರೆತ ನಡೆದಿರೋದಲ್ಲ. ಖಾದರ್ ಅವರ ತಂದೆ ಶಾಸಕರಾಗಿದ್ದ ಕಾಲದಿಂದಲೂ, ಖಾದರ್ ಅವರು ಸಚಿವರು, ಶಾಸಕರಾಗಿದ್ದ ಕಾಲದಲ್ಲಿಯೂ ಕಡಲ್ಕೊರೆತ ನಡೆದಿದೆ ಎಂದು ತಿಳಿಸಿದರು.
ಆದರೆ, ಶಾಶ್ವತ ಪರಿಹಾರ ಕೊಡಲು ವಿಫಲರಾಗಿರುವ ಖಾದರ್ ಅವರು ಈಗ ಬಿಜೆಪಿ ಸರ್ಕಾರದ ಕಾಲದಲ್ಲಿ ಆ ರೀತಿ ಆಗಬೇಕು, ಈ ರೀತಿ ಆಗಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಖಾದರ್ ಅವರು ಈ ಹಿಂದೆ ಆರೋಗ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಏನೂ ಮಾಡದೇ ಈಗ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಲ್ಲೆಗೆ ಬಿಜೆಪಿ ಖಂಡನೆ: ಕರ್ತವ್ಯದಲ್ಲಿದ್ದ ಪಿಡಿಒ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಅದೇ ಡಾ.ಜಯಪ್ರಕಾಶ್ ಎಂಬುವವರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಕೋವಿಡ್ ನಿಯಂತ್ರಣಕ್ಕಾಗಿ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಇದರಿಂದ ಅವರು ಯಾವ ರೀತಿ ಕೆಲಸ ಮಾಡಲು ಸಾಧ್ಯ. ಇದನ್ನು ಮುಸ್ಲಿಂ ಮುಖಂಡರು, ಧಾರ್ಮಿಕ ಮುಖಂಡರು ಗಮನಿಸಬೇಕು. ಅಲ್ಲದೇ ಹಲ್ಲೆ ಮಾಡಿದವರ ಮೇಲೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಡಾ.ಜಯಪ್ರಕಾಶ್ ಮೇಲೆ ಹಲ್ಲೆ ಮಾಡಿರುವಾತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಆತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದನ್ನು ಕಾಂಗ್ರೆಸ್ ಮುಖಂಡರು ಗಮನಿಸಬೇಕು ಎಂದು ಹೇಳಿದರು.
ಓದಿ: "ನೀವಿಲ್ಲದೇ ಅನಾಥರಾಗಿದ್ದೇವೆ"… ದೊರೆಸ್ವಾಮಿ ನಿಧನಕ್ಕೆ ಸುಮಲತಾ, ಪ್ರಕಾಶ್ ರೈ ಕಂಬನಿ