ಮಂಗಳೂರು; ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಸುಹೈಲ್ ಕಂದಕನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಕೊರೊನಾ ಸೋಂಕಿತರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಅವರು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರ ಬಿಲ್ಲಿನ ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರು ಐಸಿಯುಗೆ ನುಗ್ಗಿ ಮಹಿಳಾ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ದೂರಿನ ಆಧಾರದಲ್ಲಿ ಮಂಗಳೂರಿನ ಕಂಕನಾಡಿ ಪೊಲೀಸರು ಸುಹೈಲ್ ಕಂದಕನ್ನು ಇಂದು ಬಂಧಿಸಿದ್ದರು.
ಸುಹೈಲ್ ಕಂದಕ್ ಬಂಧನ ಬಳಿಕ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರೆ, ಡಿವೈಎಫ್ಐ, ಎಸ್ಡಿಪಿಐ ಸಂಘಟನೆಗಳು ಮೆಡಿಕಲ್ ಮಾಫಿಯದಿಂದ ಈ ಘಟನೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಇದಾದ ಬಳಿಕ ದೂರು ನೀಡಿದ ಇಂಡಿಯಾನ ಆಸ್ಪತ್ರೆ ದೂರನ್ನು ವಾಪಾಸು ಪಡೆದಿತ್ತು. ದೂರು ವಾಪಸು ಪಡೆದ ಹಿನ್ನೆಲೆಯಲ್ಲಿ ರಾತ್ರಿ 9:30ಕ್ಕೆ ಸುಹೈಲ್ ಕಂದಕ್ ಅವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ: ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ: ಕಾಂಗ್ರೆಸ್ ಪ್ರತಿಭಟನೆ