ಮಂಗಳೂರು: ಕೊರೊನಾ ಸೋಂಕಿನಿಂದ ದ.ಕ.ಜಿಲ್ಲೆಯಲ್ಲಿ ಆಗಿರುವ ಪರಿಣಾಮ ಹಾಗೂ ಜಿಲ್ಲಾಡಳಿತ ಮತ್ತು ಸರ್ಕಾರದಿಂದ ನಡೆಯಬೇಕಾದ ಕಾರ್ಯಯೋಜನೆಗಳ ಬಗ್ಗೆ ಮನವರಿಕೆ ಮಾಡಲು ಶಾಸಕ ಯು.ಟಿ.ಖಾದರ್ ನೇತೃತ್ವದ ಕಾಂಗ್ರೆಸ್ ನಿಯೋಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದೆ.
ಸಭೆಯ ಬಳಿಕ ಯು.ಟಿ.ಖಾದರ್ ಮಾತನಾಡಿ, ಹೊರರಾಜ್ಯ, ಹೊರದೇಶದಲ್ಲಿರುವ ದ.ಕ.ಜಿಲ್ಲೆಯ ಜನರನ್ನು ಸೂಕ್ತ ವ್ಯವಸ್ಥೆ ಮಾಡಿ ಕರೆದುಕೊಂಡು ಬರುವ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಬೇಕು. ಅವರು ಇಲ್ಲಿಗೆ ಬಂದ ಬಳಿಕ ಸೂಕ್ತ ತಪಾಸಣೆ ನಡೆಸಿ, ಕ್ವಾರೆಂಟೈನ್ ನಲ್ಲಿ ಇರಿಸಬೇಕು. ಅವರಿಗೆ ನೆಗೆಟಿವ್ ವರದಿ ಬಂದ ಬಳಿಕವೇ ಮನೆಗೆ ಕಳುಹಿಸುವಂತಹ ವ್ಯವಸ್ಥೆ ಮಾಡಲಿ. ವಿದೇಶದಲ್ಲಿರುವವರನ್ನು ಕರತರುವ ಬಗ್ಗೆ ಸಂಸದರು ಕೇಂದ್ರದ ಸಚಿವರೊಂದಿಗೆ ಚರ್ಚೆ ನಡೆಸಿ ಸೂಕ್ತ ಕಾರ್ಯ ಕೈಗೊಳ್ಳಲಿ ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೇ ವಿದೇಶಗಳಿಂದ ಖಾಸಗಿ ವಿಮಾನದ ವ್ಯವಸ್ಥೆ ಮಾಡಿದವರಿಗೆ ಇಲ್ಲಿಗೆ ಬರುಲು ಪರವಾನಗಿ ಕೊಡಲು ಸತಾಯಿಸಲಾಗುತ್ತದೆ. ಇದನ್ನು ಕೂಡಾ ಸರಿಪಡಿಸಲಿ ಎಂದು ಸಚಿವರಲ್ಲಿ ಮನವಿ ಮಾಡಿದ್ದೇವೆ. ಈ ಬಗ್ಗೆ ಅವರು ಕೇಂದ್ರದ ಮಂತ್ರಿಗಳು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಸಹಕಾರ ನೀಡಲಾಗುವುದು ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆಂದು ಹೇಳಿದರು.
ಈ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್ ನಿಯೋಗ ಇಂದು ತನ್ನನ್ನು ಭೇಟಿ ಮಾಡಿ, ಕಾಸರಗೋಡು - ದ.ಕ.ಜಿಲ್ಲೆಯ ಗಡಿ ಸಮಸ್ಯೆ, ಕೋವಿಡ್-19 ಸೋಂಕು ತಪಾಸಣೆಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಜಿಲ್ಲೆಯ ಜನರ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದೆ ಎಂದರು.
ಕಾಂಗ್ರೆಸ್ ನಿಯೋಗ ಹೇಳಿರುವ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಡಳಿತ ಪರಿಹಾರ ನೀಡುವ ಕಾರ್ಯ ಕೈಗೊಂಡಿದೆ. ಅವರು ಮನವಿ ಕೊಡುವ ಮೊದಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರೊಂದಿಗೆ ಮಾತನಾಡಿ, ಗಡಿ ಭಾಗದ ಸಮಸ್ಯೆಯಾಗಿರುವ ನೌಕರರಿಗೆ ಹೋಗಿ ಬರುವಂತಹ ವ್ಯವಸ್ಥೆ ಕಲ್ಪಿಸಬೇಕೆಂದು ಹೇಳಿದ್ದೇನೆ. ಇಂದು ಸಂಜೆಯ ಒಳಗೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ, ಇತರ ಸಮಸ್ಯೆಗಳ ಬಗ್ಗೆ ನೋಡಿ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.
ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಶುಭೋದಯ ಆಳ್ವ, ಪ್ರಸಾದ್ ಕಾಂಚನ್ ಉಪಸ್ಥಿತರಿದ್ದರು.