ಮಂಗಳೂರು: ಬೆಂಗಳೂರು ಮೂಲದ ರಾಘವೇಂದ್ರ ಕುಲಕರ್ಣಿ ಎಂಬಾತ ಪತ್ನಿಗೆ ಮೋಸ ಮಾಡಿ ಮತ್ತೊಂದು ವಿವಾಹವಾಗಿರುವುದು ಬೆಳಕಿಗೆ ಬಂದಿದೆ. ಮೂಡುಬಿದರೆ ತಾಲೂಕಿನ ಬೆಳುವಾಯಿಯ ಮಹಿಳೆಯನ್ನು 1 ಲಕ್ಷ ರೂಪಾಯಿ ವರದಕ್ಷಿಣೆ ಪಡೆದು ವಿವಾಹವಾಗಿದ್ದ ಆರೋಪಿ ಇದೀಗ ಪತ್ನಿಗೆ ಮಗುವಾಗುತ್ತಿದ್ದಂತೆ ವಂಚನೆ ಎಸಗಿದ್ದಾನೆ.
2017ರ ಜೂ.18ರಂದು ರಾಘವೇಂದ್ರ ಕುಲಕರ್ಣಿ ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ. ಈ ಮದುವೆಯ ಬಳಿಕ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡಲಾರಂಭಿಸಿದ್ದಾನೆ. ಗರ್ಭಿಣಿಯಾದ ಸಂದರ್ಭದಲ್ಲಿ ಪತ್ನಿ ತವರಿಗೆ ತೆರಳಿದ್ದರು. ಈ ವೇಳೆ ಮಗು ಜನಿಸಿದೆ. ಮರಳಿ ತವರು ಮನೆಯಿಂದ ಪತ್ನಿ, ಮಗುವನ್ನು ಕರೆದುಕೊಂಡು ಬರಲು ಆತ ಹೋಗಲೇ ಇಲ್ಲ. ಪತಿಗಾಗಿ ಕಾದು ಕೊನೆಗೆ ಇಬ್ಬರೂ ಬೆಂಗಳೂರಿನಲ್ಲಿರುವ ಪತಿ ರಾಘವೇಂದ್ರನ ಮನೆಗೆ ಬಂದಿದ್ದರು.
ಆದರೆ ಪತಿ ರಾಘವೇಂದ್ರ ಮತ್ತೆ ಆಕೆಯನ್ನು ತವರು ಮನೆಗೆ ಬಿಟ್ಟುಬಂದಿದ್ದಾನೆ. ಇತ್ತೀಚೆಗೆ ಆತ ಕರೆಗಳನ್ನು ಸ್ವೀಕರಿಸದೇ ಇರುವುದನ್ನು ಕಂಡು ಬೆಂಗಳೂರಿಗೆ ತೆರಳಿ ವಿಚಾರಿಸಿದಾಗ ಆತ ಇನ್ನೊಂದು ವಿವಾಹವಾಗಿರುವುದು ಗೊತ್ತಾಗಿದೆ. ಇದರ ಜೊತೆಗೆ, ಮೊದಲೇ ಇನ್ನೊಂದು ವಿವಾಹವಾಗಿ ಆಕೆಗೂ ವಿಚ್ಛೇದನ ನೀಡಿರುವ ವಿಚಾರ ಮುಚ್ಚಿಟ್ಟು ಮೋಸದಿಂದ ನನ್ನ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಪತ್ನಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಸಿಗರೇಟ್ ಖರೀದಿಯ ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯಾಕೆಯ ಕತ್ತು ಸೀಳಿ ಕೊಂದ ಪ್ಲಂಬರ್