ಮಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಬಳಿಕ ಸಿಎಂ ಯಡಿಯೂರಪ್ಪ ಇಂದು ನಗರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಯಡಿಯೂರಪ್ಪನವರಿಗೆ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ್ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಶೋಭಾ ಕರಂದ್ಲಾಜೆ ಸಾಥ್ ನೀಡಿದರು. ಮಂಗಳೂರು ಏರ್ಪೋರ್ಟ್ನಲ್ಲಿ ಕಮೀಷನರ್ ಪಿ.ಎಸ್ ಹರ್ಷ, ಪೊಲೀಸ್ ಉನ್ನತಾಧಿಕಾರಿ ಕಮಲ್ ಪಂತ್ ಸೇರಿದಂತೆ ಅಧಿಕಾರಿಗಳ ಜೊತೆ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಸಿಎಂ, ಘಟನೆಗೆ ಯಾರು ಕಾರಣ ಎಂದು ನಿಮಗೆ ತಿಳಿದಿದೆ. ಇದನ್ನು ನಾನು ಮತ್ತೆ ವಿವರಿಸಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು. ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡದಿರುವುದಕ್ಕೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಮಂಗಳೂರಿನಲ್ಲಿ ಈಗ ಕರ್ಫ್ಯೂ ಜಾರಿಯಲ್ಲಿದೆ. ಕರ್ಫ್ಯೂ ಮುಗಿಯಲಿ. ಪರಿಸ್ಥಿತಿ ತಿಳಿಗೊಂಡ ಮೇಲೆ ಸಿದ್ದರಾಮಯ್ಯ ಅವರಿಗೆ ಒಂದು ವಾರ ಮಂಗಳೂರಿನಲ್ಲೇ ಉಳಿದುಕೊಳ್ಳಲು ನಾನೇ ವ್ಯವಸ್ಥೆ ಮಾಡುವೆ ಎಂದರು.