ನೆಲ್ಯಾಡಿ(ದಕ್ಷಿಣ ಕನ್ನಡ): ನವೆಂಬರ್ 23 ರಂದು ಧರ್ಮಸ್ಥಳ ಸಮೀಪದ ಕುದ್ರಾಯ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಅಂಗಡಿ ಪಕ್ಕ ನಿಂತಿದ್ದವರಿಗೆ ಹಾಗೂ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿ 7 ಮಂದಿ ಗಂಭೀರ ಗಾಯಗೊಂಡಿದ್ದರು. ಈ ಘಟನೆಗೆ ಪೆರಿಯಶಾಂತಿ ರಾಜ್ಯ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳೇ ಕಾರಣವಾಗುತ್ತಿವೆ ಎಂಬ ದೂರು ಬಂದಿತ್ತು. ಇದೀಗ ಜಿಲ್ಲಾಧಿಕಾರಿಗಳ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ಕುದ್ರಾಯದಿಂದ ನೆಲ್ಯಾಡಿ ಸಮೀಪದ ಪೆರಿಯಶಾಂತಿವರೆಗಿನ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದೆ.
ಧರ್ಮಸ್ಥಳದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆರಿಯಶಾಂತಿ ವರೆಗೆ ಹೆದ್ದಾರಿಯ ಎರಡೂ ಬದಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗಿದೆ. ಆರಂಭದಲ್ಲಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದ್ದರೂ ಆ ಬಳಿಕ ವ್ಯಾಪಾರಿಗಳೇ ಅಂಗಡಿಯೊಳಗಿನ ಹಣ್ಣು-ಹಂಪಲು ಹಾಗೂ ಇತರೆ ಸಾಮಗ್ರಿಗಳನ್ನು ತೆರವುಗೊಳಿಸಿದರು.
ಲೋಕೋಪಯೋಗಿ ಇಲಾಖೆಯ ಪ್ರತಿಕ್ರಿಯೆ: ಬಗ್ಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್, 'ಧರ್ಮಸ್ಥಳ-ಪೆರಿಯಶಾಂತಿ ನಡುವಿನ ರಾಜ್ಯ ಹೆದ್ದಾರಿ ಬದಿ ಟೆಂಟ್ ಹಾಕಿ ವ್ಯಾಪಾರ ಮಾಡುತ್ತಿರುವವರಿಗೆ ಈ ಹಿಂದೆಯೇ ಮೌಖಿಕವಾಗಿ ಸೂಚನೆ ನೀಡಲಾಗಿತ್ತು. ನಿಡ್ಲೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಂಗಡಿಗಳನ್ನು ಅಲ್ಲಿನ ಗ್ರಾಮ ಪಂಚಾಯಿತಿಯವರು ತೆರವು ಮಾಡಿದ್ದರು. ಆದರೆ ಪೆರಿಯಶಾಂತಿ ಸೇರಿದಂತೆ ಇತರೆ ಕಡೆಗಳಲ್ಲಿ ತೆರವುಗೊಳಿಸಿರಲಿಲ್ಲ. ಹೆದ್ದಾರಿ ಬದಿ ಟೆಂಟ್ ಹಾಕಿ ವ್ಯಾಪಾರ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸ್ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು' ಎಂದರು.
ಬೀದಿ ಬದಿ ವ್ಯಾಪಾರಿಗಳು ಹೇಳಿದ್ದೇನು?: ಅಂಗಡಿ ತೆರವಿಗೆ ವರ್ತಕರಿಂದ ವಿರೋಧ ವ್ಯಕ್ತವಾಗದೇ ಇದ್ದರೂ ಏಕಾಏಕಿ ಅಂಗಡಿ ತೆರವುಗೊಳಿಸಲಾಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದವರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ತೆರವುಗೊಂಡ ಜಾಗದಲ್ಲೇ ವಾಹನದಲ್ಲಿ ಹಣ್ಣು ಹಂಪಲು ಇಟ್ಟು ವ್ಯಾಪಾರ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೊಲೆರೊ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಓರ್ವ ಸಾವು, 7 ಮಂದಿಗೆ ಗಾಯ