ಬೆಳ್ತಂಗಡಿ: ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಕಿಂಡಿ ಆಣೆಕಟ್ಟುಗಳಲ್ಲಿ ಸಿಲುಕಿರುವ ಕಸಕಡ್ಡಿ, ಮರಗಳ ತೆರವು ಕಾರ್ಯ ನಡೆಸಲಾಯಿತು.
ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಕೆಲವು ಸೇತುವೆಗಳಲ್ಲಿ ಮರ ಹಾಗೂ ಕಸಕಡ್ಡಿಗಳು ಸೇರಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿತ್ತು. ಅಂತಹ ಕಡೆ ಜೆಸಿಬಿ ಮೂಲಕ ಹಾಗೂ ವಿಪತ್ತು ನಿರ್ವಹಣಾ ತಂಡಗಳ ಸಹಾಯದಿಂದ ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಮಲವಂತಿಗೆ ಹಾಗೂ ಮಿತ್ತಬಾಗಿಲು ಗ್ರಾಮದ ಕಿಂಡಿ ಅಣೆಕಟ್ಟು ಹಾಗೂ ಕಿಲ್ಲೂರು, ಕೊಪ್ಪದ ಗಂಡಿಯ ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿಕೊಂಡಿರುವ ಮರ ಹಾಗೂ ಕಸವನ್ನು ಸ್ಥಳೀಯರ ಸಹಕಾರದಿಂದ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಮಾಡಿದೆ.
ಮಳೆಗಾಲದ ಈ ಸಮಯದಲ್ಲಿ ಅನೇಕ ಅನಾಹುತಗಳು ನಡೆಯುವ ಸಂಭವವಿದ್ದು, ಇಂತಹ ಸಮಸ್ಯೆಗಳು ಎದುರಾದಲ್ಲಿ ತಕ್ಷಣ ಜನರ ಕಷ್ಟಕ್ಕೆ ಸ್ಪಂದಿಸಲು ಧರ್ಮಸ್ಥಳ ಧರ್ಮಾಧಿಕಾರಿಗಳ ಸೂಚನೆಯಂತೆ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ 100 ಯುವಕರಿಗೆ ವಿಪತ್ತು ನಿರ್ವಹಣೆಯ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗಿದೆ.