ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಹಿಜಾಬ್ ವಿಚಾರವಾಗಿ ನಾನಾ ಘಟನಾವಳಿಗೆ ಕಾರಣವಾಗುತ್ತಿದ್ದ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರವೂ ಹಿಜಾಬ್ ಧರಿಸಲು ಪಟ್ಟು ಹಿಡಿದ 24 ವಿದ್ಯಾರ್ಥಿನಿಯರಿಗೆ ಒಂದು ವಾರದ ಕಾಲ ತರಗತಿಗೆ ನಿರ್ಬಂಧ ವಿಧಿಸಲಾಯಿತು.
ಕಾಲೇಜಿನಲ್ಲಿ ನಡೆಯುತ್ತಿರುವ ಅಹಿತಕರ ಘಟನಾವಳಿಯ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕಿ ಸೋಮವಾರದಂದು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು. ಹಾಗೂ ತರಗತಿಗೆ ಹಾಜರಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಭಾಗಿಯಾಗಲು ವಿನಂತಿಸಿದರು. ಆದರೆ ಅದ್ಯಾವುದಕ್ಕೂ ಮಾನ್ಯತೆ ನೀಡದ ವಿದ್ಯಾರ್ಥಿನಿಯರು ಹಿಜಾಬ್ನೊಂದಿಗೆ ಕಾಲೇಜು ಪ್ರವೇಶಿಸಲು ಹಠ ಹಿಡಿದರು.
ದಿನವಿಡೀ ನಡೆದ ಪ್ರಹಸನದ ಬಳಿಕ ಸಾಯಂಕಾಲದ ವೇಳೆ ಪ್ರಾಂಶುಪಾಲ ಶೇಖರ್ ಅವರು ಉಪನ್ಯಾಸಕರ ಸಭೆ ಕರೆದಿದ್ದರು. ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು, ಸರ್ಕಾರದ ಸುತ್ತೋಲೆ, ಕಾಲೇಜು ಅಭಿವೃದ್ಧಿ ಸಮಿತಿ ಕೈಗೊಂಡ ನಿರ್ಣಯದ ಆಧಾರದಲ್ಲಿ ಸಮವಸ್ತ್ರ ನಿಯಮಾವಳಿಯನ್ನು ಉಲ್ಲಂಘಿಸುತ್ತಾ ಕಾಲೇಜಿನ ಕಲಿಕಾ ವಾತಾವರಣವನ್ನು ಹಾನಿಗೊಳಿಸುತ್ತಿರುವ 24 ವಿದ್ಯಾರ್ಥಿನಿಯರಿಗೆ ಮುಂದಿನ ಒಂದು ವಾರದ ಕಾಲ ತರಗತಿಗೆ ನಿರ್ಬಂಧ ವಿಧಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಂಡರು. ಇದೇ ವಿವಾದಕ್ಕೆ ಸಂಬಂಧ ಈ ಹಿಂದೆಯೇ 7 ಮಂದಿ ವಿದ್ಯಾರ್ಥಿನಿಯರಿಗೆ ತರಗತಿ ನಿರ್ಬಂಧ ವಿಧಿಸಲಾಗಿತ್ತು.
ಇದನ್ನೂ ಓದಿ: ಹಿಜಾಬ್ ವಿವಾದ ಮತ್ತೋರ್ವ ವಿದ್ಯಾರ್ಥಿನಿ ಕಾಲೇಜಿನಿಂದ ಅಮಾನತು: ಒಟ್ಟು ಏಳು ವಿದ್ಯಾರ್ಥಿನಿಯರು ಅಮಾನತು..!