ಉಳ್ಳಾಲ (ದಕ್ಷಿಣಕನ್ನಡ): ಸಿಟಿ ಬಸ್ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಎಂದು ಗುರುತಿಸಲಾಗಿದೆ.
ಅವಿವಾಹಿತರಾಗಿರುವ ಜಗದೀಶ್ ಅವರು ಸ್ಟೇಟ್ ಬ್ಯಾಂಕ್ ಮತ್ತು ಕಿನ್ಯಾ ನಡುವೆ ಚಲಿಸುವ ಖಾಸಗಿ ಸಿಟಿ ಬಸ್ ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಮುಂಜಾನೆ ಸೋಮೇಶ್ವರದ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸಮುದ್ರ ತೀರದಲ್ಲಿ ಬೈಕನ್ನಿಟ್ಟು, ಟವಲೊಂದರಲ್ಲಿ ಬೈಕ್ ಕೀ, ಪರ್ಸ್, ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ.
ಜಗದೀಶ್ ಅವರ ಪರ್ಸ್ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ. ಜಗದೀಶ್ ತಂದೆ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಇವರ ತಂದೆ ಕೂಡ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಕೂಟರ್ ಕಳವು, ಇಬ್ಬರ ಬಂಧನ : ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ದಕ್ಕೆ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಇರಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಸಬಾ ಬೇಂಗ್ರೆ ನ್ಯೂ ಬದ್ರಿಯಾ ಮಸೀದಿ ಬಳಿಯ ನಿವಾಸಿ ಮೊಹಮ್ಮದ್ ಆಸಿಫ್(32), ಮಹಮ್ಮದ್ ಸಜ್ವಾನ್ (21) ಎಂದು ಗುರುತಿಸಲಾಗಿದೆ.
ವಾಹನ ಕಳವಾಗಿರುವ ಬಗ್ಗೆ ಮಹಮ್ಮದ್ ಸಿನಾನ್ ಎಂಬವರು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಪಡುಬಿದ್ರೆ ನಗರದ ಗ್ರಾಮ ಸೇವಾ ಕೇಂದ್ರದಿಂದ ಕಳವು ಮಾಡಿರುವ 2 ಲ್ಯಾಪ್ ಟಾಪ್ ಹಾಗೂ ಉತ್ತರ ದಕ್ಕೆಯಲ್ಲಿ ಕಳವು ಮಾಡಿದ ಆ್ಯಕ್ಟಿವಾ ಸ್ಕೂಟರ್ ಮತ್ತು ಮಂಕಿ ಸ್ಯಾಂಡ್ ಬಳಿ ಕಳವು ಮಾಡಿದ ಡಿಯೋ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,20,000 ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂಗಳೂರು: ಸೈನಿಕನೆಂದು ಹೇಳಿ ಮನೆ ಬಾಡಿಗೆ ನೆಪದಲ್ಲಿ ಹಿರಿಯ ನಾಗರಿಕನಿಗೆ 2.41 ಲಕ್ಷ ರೂ. ವಂಚನೆ