ಬಂಟ್ವಾಳ : ಮೇಲ್ಕಾರಿನಲ್ಲಿ ನಡೆದ ಚೆನ್ನಾ ಫಾರೂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಸಂಜೆ ಬಂಧಿಸಿದ್ದಾರೆ. ನಂದಾವರ ಮೂಲದ ಹಫೀಸ್ ಯಾನೆ ಅಪ್ಪಿ ಮತ್ತು ಅಕ್ಕರಂಗಡಿ ನಿವಾಸಿ ಇರ್ಷಾದ್ ಬಂಧಿತ ಆರೋಪಿಗಳು.
ಅ.22ರಂದು ಮೇಲ್ಕಾರ್ ಸಮೀಪ ಗುಡ್ಡೆಯಂಗಡಿ ಎಂಬಲ್ಲಿ ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನಾ ಫಾರೂಕ್ ಎಂಬಾತ ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಖಲೀಲ್ ಮತ್ತು ತಂಡ ಡಿಕ್ಕಿ ಹೊಡೆದಿದ್ದಲ್ಲದೇ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಖಲೀಲ್ ಮತ್ತು ಆತನ ಸ್ನೇಹಿತರಾದ ಹಫೀಸ್ ಯಾನೆ ಅಪ್ಪಿ ಮತ್ತು ಇರ್ಷಾದ್ ಪರಾರಿಯಾಗಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಪೊಲೀಸರು, ಮರುದಿನ ನಸುಕಿನ ಜಾವದಲ್ಲಿ ಗುಂಡ್ಯ ಸಮೀಪ ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿಗಳನ್ನು ಬಂಧಿಸಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಕೊನೆಗೆ ಆರೋಪಿ ಖಲೀಲ್ನ ಕಾಲಿಗೆ ಗುಂಡೇಟು ಹೊಡೆದು ಬಂಧಿಸಲಾಗಿತ್ತು. ಈ ಸಂದರ್ಭ ಹಫೀಸ್ ಮತ್ತು ಇರ್ಷಾದ್ ತಪ್ಪಿಸಿಕೊಂಡಿದ್ದರು. ಇಂದು ಆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.